ಟಿಸಿಎಸ್ ನಾಶಿಕ್ ಕಚೇರಿಯಲ್ಲಿ ನಡೆದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣ
- ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರ
- ಪಕ್ಕದಲ್ಲೇ ಬಂದು ಕೂರುತ್ತಿದ್ದ, ತೊಡೆಯನ್ನು ಮುಟ್ಟಿ ಮಾತನಾಡಿಸುತ್ತಿದ್ದ
- ಪ್ರಕರಣದ ಕರಾಳತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಹಿಳಾ ಟೆಕ್ಕಿ
ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ದೈತ್ಯ ಟೆಕ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ (TCS Nashik Harassment Case) ಒತ್ತಾಯಿಸಿದ ಪ್ರಕರಣ ದೇಶದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಪ್ರಸ್ತುತ, ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿದ್ದು, ಇಲ್ಲಿಯವರೆಗೆ 9 ಎಫ್‌ಐಆರ್‌ಗಳು ದಾಖಲಾದ ಬೆನ್ನಲ್ಲೇ ಕಂಪನಿಯ ಎಚ್ಆರ್ ಸೇರಿ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
'ಎನ್ಡಿಟಿವಿ' ವರದಿ ಪ್ರಕಾರ, ನಾಶಿಕ್ ಟಿಸಿಎಸ್ ಸಂಸ್ಥೆ ಸೇರಿಕೊಂಡ ಕೆಲವೇ ದಿನಗಳಲ್ಲಿ ನನ್ನ ಸಹೋದ್ಯೋಗಿಗಳು ಟೀಕಿಸಲು ಆರಂಭಿಸಿದರು. 'ಒಳ್ಳೆಯ ಆಟಗಾರ್ತಿ', 'ಜೀರೋ ಫಿಗರ್' ಎಂದು ಕರೆಯುತ್ತಿದ್ದರು. ಮತ್ತೊಂದೆಡೆ, ನಮ್ಮ ಹಿಂದು ದೇವತೆಗಳ ಬಗ್ಗೆ ನಾಲಿಗೆ ಹರಿಬಿಡುತ್ತಿದ್ದರು. ಇಲ್ಲಿನ ಕೆಟ್ಟ ಪರಿಸ್ಥಿತಿ ಅನುಭವಿಸಿರುವ ಮಹಿಳೆಯರ ಪೈಕಿ ನಾನೂ ಕೂಡ ಒಬ್ಬಳು ಎಂದು ಟೆಕ್ಕಿಯೊಬ್ಬರು ತಮ್ಮ ಟ್ರೇನಿಂಗ್ ಮುಗಿದು ಡ್ಯೂಟಿಗೆ ಜಾಯಿನ್ ಆದ ಬಳಿಕ ನಡೆದ ಘಟನೆಯ ಕರಾಳತೆಯನ್ನು ನೆನೆದು ಭಾವುಕರಾಗಿದ್ದಾರೆ.
ಪೊಲೀಸರಿಗೆ ಕಚೇರಿಯೊಳಗಿನ ಕರಾಳತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ, ನಾನು ಕೆಲಸ ಮಾಡುತ್ತಿದ್ದ ಜಾಗಕ್ಕೆ ಮತ್ತೊಬ್ಬ ಟೀಮ್ನ ಆಸೀಫ್ ಅನ್ಸಾರಿ, ನನ್ನ ಬಳಿಗೆ ಪದೇ ಪದೇ ಬರುತ್ತಿದ್ದ. ಖುರ್ಚಿಯೇ ಇಲ್ಲದಿದ್ದರೂ, ನನ್ನ ಪಕ್ಕದಲ್ಲಿ ಬಂದು ಅಂಟಿಕೊಂಡು ಕೂರುತ್ತಿದ್ದ. ಇಷ್ಟಕ್ಕೆ ಸುಮ್ಮನಾಗದ ಆತ, ದೈಹಿಕವಾಗಿ ಜೊತೆಗಿರಲು ಪ್ರಯತ್ನಿಸುತ್ತಿದ್ದ. ಉದ್ದೇಶಪೂರ್ವಕವಾಗಿ ಅವನು ನನ್ನ ದೇಹವನ್ನು ಮುಟ್ಟುತ್ತಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ.
ನನ್ನ ಕೈಯನ್ನು ಎಳೆಯುತ್ತಿದ್ದ. ಕೆಲವೊಮ್ಮೆ ತೊಡೆ ಅಥವಾ ಭುಜದ ಮೇಲೆ ತನ್ನ ಕೈಯಿಡುತ್ತಿದ್ದನ್ನು. ಇದರಿಂದಾಗಿ ನನಗೆ ತೀವ್ರ ಮುಜುಗರ ಉಂಟಾಗುತ್ತಿತ್ತು. ಒಮ್ಮೆ, ಅವನು ನನ್ನ ಹತ್ತಿರ ಬಂದು, ನನ್ನ ಹೊಟ್ಟೆ ಮತ್ತು ಸೊಂಟವನ್ನು ಸ್ಪರ್ಶಿಸಿದ್ದ. ನಿನ್ನದು ಜೀರೋ ಫಿಗರ್ ಎನ್ನುತ್ತಿದ್ದ. ಇನ್ನೊಂದು ಸಂದರ್ಭದಲ್ಲಿ, ನಾನು ಗ್ಯಾಲರಿಯಲ್ಲಿ ನಿಂತಿದ್ದಾಗ, ಹಿಂಬದಿಯಿಂದ ಬಂದ ಆಸೀಫ್, ಏಕಾಏಕಿ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡ. ಕೂಡಲೇ ಆತನನ್ನು ಬಲವಂತವಾಗಿ ದೂರ ತಳ್ಳಿ ಸ್ಥಳದಿಂದ ಓಡಿಹೋದೆ" ಎಂದು ಹೇಳಿಕೊಂಡಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಸಿಲುಕಿದ ಹಲವಾರು ಮಹಿಳಾ ಉದ್ಯೋಗಿಗಳಂತೆ ನಾನೂ ಸಹ ನನ್ನ ಪುರುಷ ಸಹೋದ್ಯೋಗಿಗಳಿಂದ ಹಿಂಸೆ ಅನುಭವಿಸಿದ್ದೆ ಎಂದು ಮತ್ತೊಬ್ಬರು ಕಹಿ ಘಟನೆಯನ್ನು ಪೊಲೀಸರ ಮುಂದೆ ವಿವರಿಸಿದ್ದಾರೆ. ಮತ್ತೊಂದೆಡೆ, ಈ ಪ್ರಕರಣದಿಂದ ಕೆಂಡಮಂಡಲಗೊಂಡಿರುವ ಮಹಾರಾಷ್ಟ್ರ ಸಿಎಂ, "ಕಾರ್ಪೊರೇಟ್ ಜಿಹಾದ್"ನಲ್ಲಿ ಸೂಚಿಸುವಂತೆ ಈ ವಿಷಯವು ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).