ರ‍್ಯಾಪರ್ ಬಾದ್‌ಶಾ (Rapper Badshah) 
ದೇಶ

ತಟೀರಿ ಹಾಡಿನ ವಿವಾದ: ರ‍್ಯಾಪರ್ ಬಾದ್‌ಶಾ ವಿರುದ್ಧ ಎಫ್‌ಐಆರ್ ದಾಖಲು; ದೇಶ ಬಿಡದಂತೆ ಲುಕ್‌ಔಟ್ ನೋಟಿಸ್ ಜಾರಿ! Rapper Badshah

ಪ್ರಮುಖ ಮುಖ್ಯಾಂಶಗಳು

  • ರ‍್ಯಾಪರ್ ಬಾದ್‌ಶಾ ಹೊಸ ವಿವಾದ
  • ತಟೀರಿ ಹಾಡಿನಲ್ಲಿ ಶಾಲಾ ವಿದ್ಯಾರ್ಥಿನಿಯರ ಅಸಮರ್ಪಕ ಬಳಕೆ ಆರೋಪ
  • ಎಫ್​ಐಆರ್​ ದಾಖಲಿಸಿದ ಹರಿಯಾಣಾ ಪೊಲೀಸರು
ಹರಿಯಾಣ: ತನ್ನ ತೂಕಡಿಸುವ ರ‍್ಯಾಪ್‌ ಹಾಡುಗಳ ಮೂಲಕ ಯುವಜನತೆಯನ್ನು ಹುಚ್ಚೆಬ್ಬಿಸುವ ರ‍್ಯಾಪರ್ ಬಾದ್‌ಶಾ (Rapper Badshah) ಈಗ ಕಾನೂನಿನ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ಇತ್ತೀಚಿನ 'ತಟೀರಿ' (Tateeree) ಎಂಬ ಹಾಡಿನಲ್ಲಿ ಶಾಲಾ ವಿದ್ಯಾರ್ಥಿನಿಯರನ್ನು ಅಸಂಬದ್ಧವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಇದೀಗ ಹರಿಯಾಣ ಪೊಲೀಸರು ಗಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ನಡೆದಿದ್ದೇನು?

ಬಾದ್‌ಶಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ 'ತಟೀರಿ' ಹಾಡು ರಿಲೀಸ್ ಆದ ಕೆಲವೇ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆದರೆ, ಹಾಡಿನಲ್ಲಿದ್ದ ದೃಶ್ಯಗಳು ಮಾತ್ರ ಭಾರೀ ವಿವಾದಕ್ಕೆ ಕಾರಣವಾಯಿತು. ಶಾಲಾ ಸಮವಸ್ತ್ರ ಧರಿಸಿದ ಬಾಲಕಿಯರು ಹರಿಯಾಣ ರೋಡ್‌ವೇಸ್ ಬಸ್‌ನಲ್ಲಿ ನೃತ್ಯ ಮಾಡುವುದು, ಆಕ್ಷೇಪಾರ್ಹ ಸನ್ನೆಗಳನ್ನು ಮಾಡುವುದು ಮತ್ತು ಶಾಲೆಗಿಂತ ಮೋಜಿನ ಕಡೆಗೆ ಗಮನ ಹರಿಸುವ ದೃಶ್ಯಗಳು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
'ಪಾಠಶಾಲಾ' ಎಂಬ ಶಬ್ದವನ್ನು 'ಬಾದ್‌ಶಾಲಾ' ಎಂದು ವಿರೂಪಗೊಳಿಸಿ ಬಳಸಿದ್ದು ಮತ್ತು ಶಾಲಾ ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ತೋರಿಸಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಪಂಚಕುಲದ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾದ್‌ಶಾ ಮೇಲೆ ಕಠಿಣ ಕ್ರಮದ ಬಿಸಿ

ಕೇವಲ ಎಫ್‌ಐಆರ್ ಮಾತ್ರವಲ್ಲ, ಬಾದ್‌ಶಾ ದೇಶ ಬಿಟ್ಟು ಪರಾರಿಯಾಗದಂತೆ ತಡೆಯಲು ಪೊಲೀಸರು ಲುಕ್‌ಔಟ್ ನೋಟಿಸ್​ ಹೊರಡಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಆರೋಪಿ ಬಾದ್‌ಶಾ ಅವರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ವಿವಾದಾತ್ಮಕ ಹಾಡನ್ನು ಯೂಟ್ಯೂಬ್‌ನಿಂದ ತೆಗೆಯಲಾಗಿದೆ.
ಉಳಿದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದಲೂ ವೀಡಿಯೊ ತೆಗೆಸಲು ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಪೋಲೀಸರ ಮುಂದೆ ವಿಚಾರಣೆಗೆ ಹಾಜರಾಗಲು ಗಾಯಕನಿಗೆ ನೋಟಿಸ್ ನೀಡಲಾಗಿದೆ.

ಮಹಿಳಾ ಆಯೋಗದ ಸಮನ್ಸ್

ಈ ಪ್ರಕರಣದಲ್ಲಿ ಹರಿಯಾಣ ರಾಜ್ಯ ಮಹಿಳಾ ಆಯೋಗ ಕೂಡ ನೇರವಾಗಿ ಮಧ್ಯಪ್ರವೇಶಿಸಿದೆ. ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರು ಬಾದ್‌ಶಾಗೆ ಸಮನ್ಸ್ ಜಾರಿ ಮಾಡಿದ್ದು, ಮಾರ್ಚ್ 13 ರಂದು ವಿಚಾರಣೆಗೆ ಹಾಜರಾಗಿ, ಇಂತಹ ಸಾಹಿತ್ಯ ಮತ್ತು ದೃಶ್ಯಗಳನ್ನು ಬಳಸಲು ಕಾರಣವೇನು ಎಂದು ಉತ್ತರಿಸುವಂತೆ ತಾಕೀತು ಮಾಡಿದ್ದಾರೆ.

ಸರ್ಕಾರಿ ಆಸ್ತಿ ದುರ್ಬಳಕೆ?

ವಿವಾದ ಅಷ್ಟಕ್ಕೇ ನಿಂತಿಲ್ಲ. ಶೂಟಿಂಗ್‌ಗಾಗಿ ಸರ್ಕಾರಿ ಬಸ್ ಮತ್ತು ಶಾಲಾ ಆವರಣವನ್ನು ಬಳಸಲು ಬಾದ್‌ಶಾ ಮತ್ತು ಅವರ ತಂಡ ಅಗತ್ಯ ಅನುಮತಿ ಪಡೆದಿದ್ದರಾ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸರ್ಕಾರದ ಆಸ್ತಿಯನ್ನು ಅಸಭ್ಯ ವಿಡಿಯೋಗಾಗಿ ಬಳಸಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಶಾಲಾ ಬಾಲಕಿಯರನ್ನು ಹೀಗೆ ಚಿತ್ರಿಸಿರುವುದು ನಮ್ಮ ಸಂಸ್ಕೃತಿಯ ವಿರುದ್ಧ ಎಂದು ಹರಿಯಾಣ ಶಿಕ್ಷಣ ಸಚಿವರು ಕೂಡ ತೀವ್ರವಾಗಿ ಖಂಡಿಸಿದ್ದಾರೆ,(ಏಜನ್ಸೀಸ್​).