Kashi famous lassi kachori and chaat gets at varanasi ghats:  
ದೇಶ

ಯುಪಿ ಸರ್ಕಾರದ ಹೊಸ ಪ್ಲ್ಯಾನ್​; ಇನ್ಮುಂದೆ ವಾರಣಾಸಿಯ ಘಾಟ್​ಗಳಲ್ಲೇ ಸಿಗಲಿದೆ ಕಾಶಿಯ ಪ್ರಸಿದ್ಧ ಲಸ್ಸಿ, ಕಚೋರಿ!

ವಾರಣಾಸಿ: ಭಾರತದ ಪ್ರಖ್ಯಾತ ತೀರ್ಥಕ್ರೇತ್ರಗಳಲ್ಲಿ ಒಂದಾದ ಕಾಶಿಯ ಸಾಂಪ್ರದಾಯಿಕ ಆಹಾರದ ರುಚಿಯನ್ನು ಜನರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಜನಪ್ರಿಯ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಮತ್ತು ವಾರಣಾಸಿ ನಗರ ನಿಗಮದ ಸಹಭಾಗಿತ್ವದಲ್ಲಿ ʼಸ್ವಿಗ್ಗಿ ಜೊತೆಗೆ ವಾರಣಾಸಿಯ ರುಚಿʼ (ವಾರಣಾಸಿ ಕಾ ಸ್ವಾದ್, ಸ್ವಿಗ್ಗಿ ಕೆ ಸಾಥ್) ಎಂಬ ಹೊಸ ಯೋಜನೆಯನ್ನು ಸ್ವಿಗ್ಗಿ ಪರಿಚಯಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೂನ್ 12 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ನೋಂದಣಿ ಮತ್ತು ಮುದ್ರಾಂಕ ಖಾತೆ ರಾಜ್ಯ ಸಚಿವ ಹಾಗೂ ವಾರಣಾಸಿ ಉತ್ತರ ಕ್ಷೇತ್ರದ ಶಾಸಕ ರವೀಂದ್ರ ಜೈಸ್ವಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಘಾಟ್‌ಗಳಲ್ಲೇ ಸಿಗಲಿದೆ ಪ್ರಸಿದ್ಧ ತಿನಿಸುಗಳು

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಸುಂದರವಾಗಿ ವಿನ್ಯಾಸಗೊಳಿಸಲಾದ ಸಾಂಪ್ರದಾಯಿಕ ತಳ್ಳುಗಾಡಿಗಳನ್ನು ವಾರಣಾಸಿಯ ಪ್ರಮುಖ ಮತ್ತು ಜನನಿಬಿಡ ಘಾಟ್‌ಗಳಾದ ನಮೋ ಘಾಟ್, ಅಸ್ಸಿ ಘಾಟ್ ಮತ್ತು ದಶಾಶ್ವಮೇಧ ಘಾಟ್‌ಗಳಲ್ಲಿ ನಿಲ್ಲಿಸಲಾಗುತ್ತದೆ. ಪ್ರವಾಸಿಗರು ಘಾಟ್‌ನ ಸೌಂದರ್ಯ ಸವಿಯುತ್ತಲೇ ಇವುಗಳಿಂದ ನಗರದ ಪ್ರಸಿದ್ಧ ಮಳಿಗೆಗಳ ಆಹಾರವನ್ನು ಪಡೆದು ಆನಂದಿಸಬಹುದಾಗಿದೆ.

ಯಾವೆಲ್ಲ ಸಿಹಿ ಸಿಗಲಿದೆ?

ಪಾಪ್ಯುಲರ್ ಬಾಟಿ ಚೋಖಾ, ಚಾಚಿ ಕೀ ಪ್ರಸಿದ್ಧ್ ಕಚೋರಿ, ಲಕ್ಷ್ಮಿ ಚಾಯ್, ಪೈಲ್ವಾನ್ ಲಸ್ಸಿ, ಗಾಮ ಪಾನ್ ಭಂಡಾರ್, ಕಾಶಿ ಚಾಟ್ ಭಂಡಾರ್, ನೀಲು ಕಚೋರಿ, ಟೇಸ್ಟ್ ಕಿಂಗ್, ಪಾಠಕ್ ಜಿ ಥಂಡಾಯ್ ವಾಲಾ, ನೇತಾಜಿ ಪಾನ್ ಭಂಡಾರ್, ಗೌರಿ ಶಂಕರ್ ಕಚೋರಿ ವಾಲಾ, ಮತ್ತು ಬನಾರಸಿ ಪಾನ್ ಮಂದಿರ ಈ ಮಳಿಗೆಗಳ ಪಟ್ಟಿಯಲ್ಲಿ ಸೇರಿವೆ.
"ಕಾಶಿಯನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡುವುದು ಪ್ರಧಾನಿಯವರ ಕನಸು. 'ಒಂದು ಜಿಲ್ಲೆ, ಒಂದು ಖಾದ್ಯ' ಯೋಜನೆಯಡಿ ಕಾಶಿಯ ಪಾನ್, ಮಲೈಯೋ, ಲಸ್ಸಿ, ಕಚೋರಿಯಂತಹ ಆಹಾರಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸ್ವಿಗ್ಗಿಯ ಈ ಪ್ರಯತ್ನ ನೆರವಾಗಲಿದೆ,” ಎಂದು ವಾರಣಾಸಿ ಜಿಲ್ಲಾಧಿಕಾರಿ ಸತ್ಯೇಂದ್ರ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು, (ಏಜೆನ್ಸೀಸ್).