- ಇರಾನ್ ಪ್ರತಿಭಟನೆಯಲ್ಲಿ 500ಕ್ಕೂ ಅಧಿಕ ಮಂದಿ ಬಲಿ
- ಇರಾನ್ ಜತೆ ವ್ಯಾಪಾರ, ದೇಶಗಳ ಮೇಲೆ ಶೇ.25ರಷ್ಟು ಸುಂಕ
- ಟ್ರಂಪ್ ಸುಂಕ ಸಮರದಿಂದ ಭಾರತಕ್ಕೆ ತಟ್ಟಲಿದೆಯೇ ಬಿಸಿ
ಟೆಹ್ರಾನ್: ಇರಾನ್‌ನಾದ್ಯಂತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಇರಾನ್‌ನಲ್ಲಿ ಉಳಿದಿರುವ ಅಮೆರಿಕನ್ನರಿಗೆ ಈ ಕೂಡಲೇ ಅಲ್ಲಿಂದ ಹೊರಡುವಂತೆ ಯುಎಸ್ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಇದರೊಟ್ಟಿಗೆ ಇರಾನ್‌ನೊಂದಿಗೆ ವ್ಯಾಪಾರ ಮಾಡುವ ದೇಶಗಳಿಗೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಇರಾನ್ ಮೇಲಿನ ಕೋಪ...
ಇರಾನ್ ದಂಗೆಯ ಹಿನ್ನೆಲೆಯಲ್ಲಿ, ಟ್ರಂಪ್ ಆ ದೇಶದೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25ರಷ್ಟು ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿದ್ದಾರೆ. ಆದಾಗ್ಯೂ, ಈ ನಿರ್ಧಾರವು ಭಾರತದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಪ್ರಶ್ನೆಗಳು ಇದೀಗ ಉದ್ಬವಿಸಿವೆ. ಭಾರತವು ಇರಾನ್‌ನ ಅಗ್ರ 5 ವ್ಯಾಪಾರ ಪಾಲುದಾರರಲ್ಲಿ ಒಂದು ಎಂಬುದು ಇಲ್ಲಿ ಗಮನಾರ್ಹ.
ಭಾರತ ಇರಾನ್‌ನೊಂದಿಗೆ ವ್ಯಾಪಾರ ಮಾಡಿದರೆ, ಪ್ರಸ್ತುತ ಶೇ.50ರಷ್ಟು ಸುಂಕವು ಈಗಿನ ಶೇ.25 ಸೇರಿ ಒಟ್ಟು ಶೇ.75ರಷ್ಟು ಹೆಚ್ಚಾಗಲಿದೆ. ಇರಾನ್ ಭಾರತಕ್ಕೆ ದೀರ್ಘಕಾಲೀನ ವ್ಯಾಪಾರ ಮತ್ತು ಕಾರ್ಯತಂತ್ರದ ಪಾಲುದಾರ. ಇರಾನ್‌ನ ಆಮದುಗಳಿಗೆ ಹೋಲಿಸಿದರೆ, ಭಾರತದ ರಫ್ತು ಹೆಚ್ಚಿದೆ. ಇದಲ್ಲದೆ, ಚೀನಾ ಪಾಕಿಸ್ತಾನದಲ್ಲಿ ನಿರ್ಮಿಸುತ್ತಿರುವ ಗ್ವಾದರ್ ಬಂದರಿಗೆ ಪ್ರತಿಯಾಗಿ ಭಾರತ ಇರಾನ್‌ನಲ್ಲಿ ಚಾಬಹಾರ್ ಬಂದರನ್ನು ನಿರ್ಮಿಸಲಿದೆ. ಇದರ ಮೂಲಕ, ಪಾಕಿಸ್ತಾನದ ಅಗತ್ಯವಿಲ್ಲದೆ ಭಾರತವು ಮಧ್ಯ ಏಷ್ಯಾವನ್ನು ಸುಲಭವಾಗಿ ತಲುಪಬಹುದು.
ಇನ್ನು ಚೀನಾ ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಭಾರತವು ಅಗ್ರ 5 ರಲ್ಲಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, 2024–25ರಲ್ಲಿ ದ್ವಿಪಕ್ಷೀಯ ವ್ಯಾಪಾರವು ಸುಮಾರು 1.68 ಬಿಲಿಯನ್ (ಅಂದರೆ 14,000-15,000 ಕೋಟಿ ರೂ.) ಡಾಲರ್, ಭಾರತದ ರಫ್ತು 1.24 ಬಿಲಿಯನ್ ಡಾಲರ್ ಮತ್ತು ಆಮದು 440 ಮಿಲಿಯನ್ ಡಾಲರ್ ಎನ್ನಲಾಗಿದೆ. ಭಾರತವು ಸಾವಯವ ಗೊಬ್ಬರಗಳು, ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ಔಷಧಿ, ಹಣ್ಣುಗಳು, ಧಾನ್ಯ ಮತ್ತು ಮಾಂಸ ಉತ್ಪನ್ನಗಳನ್ನು ಇರಾನ್‌ಗೆ ರಫ್ತು ಮಾಡುತ್ತದೆ. ಆಮದುಗಳಲ್ಲಿ ಮೆಥನಾಲ್, ಪೆಟ್ರೋಲಿಯಂ ಬಿಟುಮೆನ್, ದ್ರವೀಕೃತ ಪ್ರೊಪೇನ್, ಸೇಬು, ಖರ್ಜೂರ ಮತ್ತು ಕೆಮಿಕಲ್ ಉತ್ಪನ್ನಗಳು ಸೇರಿವೆ.
ರಷ್ಯಾದಿಂದ ತೈಲ ಖರೀದಿಸಿದ್ರೆ ಶೇ.500ರಷ್ಟು ಸುಂಕ
ವರ್ಷಗಳಲ್ಲಿ ಅತಿದೊಡ್ಡ ಸರ್ಕಾರಿ ವಿರೋಧಿ ಪ್ರತಿಭಟನೆಗೆ ಸಾಕ್ಷಿಯಾಗುತ್ತಿರುವ ಇರಾನ್ ಸುತ್ತ ಕುಣಿಕೆ ಇನ್ನೂ ಬಿಗಿಗೊಳ್ಳುತ್ತಿದೆ. ಈ ಸುಂಕ ಸಮರದ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡಬಾರದು ಎಂಬ ಟ್ರಂಪ್ ನಿರ್ಬಂಧಗಳ ಹೊರತಾಗಿಯೂ ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ಸುಂಕವನ್ನು ವಿಧಿಸುವ ಪ್ರಸ್ತಾವನೆಗೆ ಅಮೆರಿಕ ಮುಂದಾಗಿದೆ. ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳನ್ನು ಗುರಿಯಾಗಿಸುವ ಮಸೂದೆಯನ್ನು ಟ್ರಂಪ್ ಈಗಾಗಲೇ ಅನುಮೋದಿಸಿರುವುದು ಗಮನಾರ್ಹ,(ಏಜೆನ್ಸೀಸ್).