- ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮಗುವಿಗೆ ಜನನ
- ನೈಸರ್ಗಿಕವಾಗಿ ಮನೆಯಲ್ಲೇ ಹೇರಿಗೆಗೆ ಮುಂದಾದ ಮಹಿಳೆ ಸಾವು
ತಮಿಳುನಾಡು: ಎರಡನೇ ಮಗುವಿಗೆ ಜನ್ಮ ಕೊಡುವ ಖುಷಿಯಲ್ಲಿದ್ದ ಗರ್ಭಿಣಿ, ಅಂದುಕೊಂಡಂತೆ ಮನೆಯಲ್ಲೇ ಹೇರಿಗೆ ಮಾಡಿಕೊಂಡರೂ ದುರಂತವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಉತ್ತುಕುಳಿ ಬಳಿಯ ತಲವಾಯಪಾಳ್ಯಂನಲ್ಲಿ ವರದಿಯಾಗಿದೆ.
ಆಸ್ಪತ್ರೆಯಲ್ಲಿ ನುರಿತ ವೈದ್ಯಕೀಯರನ್ನು ಸಂಪರ್ಕಿಸಿ, ಅವರ ಸಹಾಯದಿಂದ ಮಗುವಿಗೆ ಜನ್ಮ ನೀಡಬೇಕಿದ್ದ ಮಹಿಳೆ, ಎರಡನೇ ಶಿಶುವಿನ ಜನನ ನಮ್ಮ ಮನೆಯಲ್ಲೇ ಸುಸೂತ್ರವಾಗಿ ಆಗಬೇಕು ಎಂದು ಬಯಸಿದ್ದಳು. ಅಂತೆಯೇ, ಕುಟುಂಬ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಯಾರ ಸಹಾಯವನ್ನೂ ಬಯಸದೆ ಸ್ವಯಂಪ್ರೇರಿತ ಹೇರಿಗೆಗೆ ಯೂಟ್ಯೂಬ್ ವಿಡಿಯೊಗಳನ್ನು ನೋಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಮೃತ ಯುವತಿಯನ್ನು ಶಶಿಕಲಾ (32) ಎಂದು ಗುರುತಿಸಲಾಗಿದ್ದು, ಈ ವಿಷಯ ಪತಿ ಕಾರ್ತಿಕ್ ಮತ್ತು ಕುಟುಂಬಸ್ಥರಿಗೆ ಮೊದಲೇ ಗೊತ್ತಿತ್ತು ಎಂಬುದು ದುಃಖಕರ. ದಂಪತಿಗೆ ನಾಲ್ಕು ವರ್ಷದ ಪುತ್ರಿಯಿದ್ದು, ಎರಡನೇ ಮಗುವಿಗೆ ತಾಯಿಯಾಗಲು ಶಶಿಕಲಾ ಸಂತಸದಲ್ಲಿದ್ದರು. ಮನೆಯಲ್ಲೇ ನೈಸರ್ಗಿಕವಾಗಿ ಡೆಲಿವರಿ ಮಾಡಿಕೊಳ್ಳಲು ಮುಂದಾದ ಶಶಿಕಲಾಗೆ ಮಗುವೇನೋ ಜನಿಸಿತು. ಆದ್ರೆ, ವಿಪರೀತ ರಕ್ತಸ್ರಾವದಿಂದ ಪ್ರಾಣಪಕ್ಷಿ ಹಾರಿಹೋಗಿದೆ.
ಮಗುವಿಗೆ ಜನ್ಮ ಕೊಟ್ಟ ಬಳಿಕ ರಕ್ತಸ್ರಾವ ನಿಲ್ಲದಿದ್ದನ್ನು ಕಂಡು ಗಾಬರಿಗೊಂಡ ಕುಟುಂಸ್ಥರು ತಕ್ಷಣದ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಇಲ್ಲಿ ಬದುಕುಳಿಯುವುದು ಕಷ್ಟಸಾಧ್ಯ ಎಂದು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆಗೆ ಶಶಿಕಲಾ ದಾರಿ ಮಧ್ಯೆಯೇ ಉಸಿರು ಚೆಲ್ಲಿರುವುದು ದೃಢವಾಗಿದೆ. ಘಟನೆ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದ್ದು, ಉತ್ತುಕುಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).