ತಮಿಳುನಾಡು ಚುನಾವಣೆ  
ದೇಶ

ತಮಿಳುನಾಡು ಚುನಾವಣೆಯ ದಳಪತಿ ಯಾರು? ಸಮೀಕ್ಷೆಯಲ್ಲಿ ಹೊರಬಿತ್ತು ಅಚ್ಚರಿ ಸಂಗತಿಗಳು | Tamilnadu Poll Survey ​

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಚುನಾವಣೆಯಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೆ?
  • ಮುಖ್ಯಮಂತ್ರಿ ರೇಸ್‌ನಲ್ಲಿ ವಿಜಯ್ ಅವರ ಸಂಖ್ಯೆ ಎಷ್ಟು?
  • ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ ಸಮೀಕ್ಷೆಗಳು
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ಭಾರೀ ಸದ್ದು ಮಾಡುತ್ತಿದ್ದು, ಕಣಕ್ಕಿಳಿದಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಮತ್ತು ತಮ್ಮ ತಮ್ಮ ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿದ್ದಾರೆ. ಇದೇ ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ, ಎರಡು ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ.
ಈ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದರ ಕುರಿತು ಹಲವು ಆಸಕ್ತಿದಾಯಕ ವಿಚಾರಗಳು ರಿವೀಲ್​ ಆಗಿವೆ. ಚುನಾವಣೆಗೂ ಮೊದಲು ಹೊಸ ಪಕ್ಷವನ್ನು ರಚಿಸಿ, ಸ್ವತಂತ್ರವಾಗಿ ತಮಿಳುನಾಡು ರಾಜಕೀಯ ಅಖಾಡಕ್ಕಿಳಿದರುವ ವಿಜಯ್ ಅವರ ಟಿವಿಕೆ ಪಕ್ಷ​, ಅನಿರೀಕ್ಷಿತ ರೀತಿಯಲ್ಲಿ ಮತಗಳನ್ನು ಗಳಿಸುತ್ತದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ.
ಲೋಕಪೋಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಸ್ತುತ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಮೈತ್ರಿಕೂಟವು 234 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಮತ್ತು 181-189 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಈ ಮೈತ್ರಿಕೂಟವು ಶೇ.40.1ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ವಿರೋಧ ಪಕ್ಷದ ಎಐಎಡಿಎಂಕೆ ಮೈತ್ರಿಕೂಟ (ಎನ್‌ಡಿಎ) 38 ರಿಂದ 42 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಅದು ಶೇ.29ರಷ್ಟು ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಮಾರ್ಚ್ 1ರಿಂದ ಏಪ್ರಿಲ್ 1ರವರೆಗೆ ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಇನ್ನು ಅಭಿನಯಕ್ಕೆ ಗುಡ್​ಬೈ ಹೇಳಿ, ಪೂರ್ಣ ಪ್ರಮಾಣದಲ್ಲಿ ರಾಜಕಾರಣಿ ಆಗುವುದಾಗಿ ಹೇಳಿ, ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ಪಕ್ಷವನ್ನು ರೂಪಿಸಿರುವ ವಿಜಯ್​, ಉತ್ತಮ ಮತಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ವಿಜಯ್ ಅವರ ಪಕ್ಷವು ಈ ವಿಧಾನಸಭಾ ಚುನಾವಣೆಯಲ್ಲಿ 8ರಿಂದ 10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಶೇ.23.9ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಎನ್‌ಟಿಕೆ ಮತ್ತು ಇತರ ಪಕ್ಷಗಳು ಕ್ರಮವಾಗಿ ಶೇ.4.9 ಮತ್ತು ಶೇ.2.1ರಷ್ಟು ಮತಗಳನ್ನು ಗಳಿಸಿವೆ ಎಂದಿದೆ ಸಮೀಕ್ಷೆ .
ಈ ಸಮೀಕ್ಷೆಯ ಪ್ರಕಾರ, ಅಧಿಕ ಜನರು ಎಂಕೆ ಸ್ಟಾಲಿನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಯಸಿದ್ದಾರೆ. ಅವರ ಬಳಿಕ ವಿಜಯ್ ಮತ್ತು ಪಳನಿಸ್ವಾಮಿ ರೇಸ್​ನಲ್ಲಿದ್ದಾರೆ. ಡಿಎಂಕೆ ಮೈತ್ರಿಕೂಟದ ಪ್ರಮುಖ ಶಕ್ತಿಯೇ ಅವರ ಹಲವಾರು ಯೋಜನೆಗಳು ಎಂದು ಸಮೀಕ್ಷೆ ಹೇಳಿದೆ. "ಕಲೈಗ್ನರ್ ಮಹಿಳಾ ಉರಿಮೈ ತೊಗೈ", ಉಚಿತ ಬಸ್ ಪ್ರಯಾಣ ಮತ್ತು ಉಪಾಹಾರ ಯೋಜನೆಗಳು. ವಿಶೇಷವಾಗಿ ಇದಕ್ಕೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಮತ್ತೊಂದೆಡೆ, ವಿಜಯ್ ಅವರ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಿದರೆ ಈ ಚುನಾವಣೆಯಲ್ಲಿ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿಲ್ಲ ಎಂದು ಸಮೀಕ್ಷೆಗಳು ಹೇಳಿವೆ. ಇನ್ನು 'ಪೋಲ್ ಟ್ರ್ಯಾಕರ್' ಎಂಬ ಮತ್ತೊಂದು ಸಮೀಕ್ಷೆಯು, ಡಿಎಂಕೆ ಮೈತ್ರಿಕೂಟವು ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದೆ. ಇದರ ಪ್ರಕಾರ, ಡಿಎಂಕೆ ಮೈತ್ರಿಕೂಟವು 172-178 ಸ್ಥಾನಗಳನ್ನು ಗೆದ್ದು, ಶೇ.42.7ರಷ್ಟು ಮತ ಪಾಲನ್ನು ಪಡೆಯುವ ನಿರೀಕ್ಷೆಯಿದೆ. 
ಎಐಎಡಿಎಂಕೆ 46ರಿಂದ 52 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆಯಿದೆ. ಅದೇ ರೀತಿ, ಟಿವಿಕೆ ಪಕ್ಷವು ಶೇ.19.2 ರಷ್ಟು ಮತ ಪಾಲನ್ನು ಪಡೆದು 6ರಿಂದ 12 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಎನ್‌ಟಿಕೆ 0-2 ಸ್ಥಾನಗಳನ್ನು ಮತ್ತು ಸುಮಾರು ಶೇ.5.1ರಷ್ಟು ಮತ ಪಾಲನ್ನು ಪಡೆಯುವ ನಿರೀಕ್ಷೆಯಿದೆ. ಜನರ ದೃಷ್ಟಿಯಲ್ಲಿ ಎಂಕೆ ಸ್ಟಾಲಿನ್ ಒಬ್ಬ ಅನುಭವಿ ನಾಯಕ ಎಂದು ಪೋಲ್ ಟ್ರ್ಯಾಕರ್ ಸಮೀಕ್ಷೆಯು ಬಹಿರಂಗಪಡಿಸಿದೆ. ಮೇಲ್ನೋಟಕ್ಕೆ ಇದನ್ನೆಲ್ಲ ನೋಡುವುದಾದರೆ, ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಟಾಲಿನ್ ಪಕ್ಷವೇ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ,(ಏಜೆನ್ಸೀಸ್).