ಬೆಂಗಳೂರು ಟು... ಜೀವದ ಹಂಗು ತೊರೆದು ಗುಟ್ಕಾ ಸ್ಮಗ್ಲರ್​ಗಳ ಹಿಡಿದ ಪೇದೆಯ ಪ್ರೊಮೋಷನ್​ಗೆ ನೆಟ್ಟಿಗರ ಪಟ್ಟು  
ದೇಶ

ಬೆಂಗಳೂರು ಟು... ಜೀವದ ಹಂಗು ತೊರೆದು ಗುಟ್ಕಾ ಸ್ಮಗ್ಲರ್​ಗಳ ಹಿಡಿದ ಖಾಕಿ ಪ್ರೊಮೋಷನ್​ಗೆ ನೆಟ್ಟಿಗರ ಪಟ್ಟು | Tamilnadu Cop

ಜೀವದ ಹಂಗನ್ನೂ ತೊರೆದು ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಡಿಗೇಡಿಗಳು ತಪ್ಪಿಸಿಕೊಳ್ಳಬಾರದು ಎಂದು, ಅವರ ಕಾರಿನ ಮೇಲೆ ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದ ವೇಲ್​ಮುರುಗನ್​, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಆರೋಪಿಗಳನ್ನು ಸೆರೆಹಿಡಿದಿದ್ದು ಸದ್ಯ ನೆಟ್ಟಿಗರ ಒಂದು ಡಿಮಾಂಡ್​ಗೆ ಕಾರಣವಾಗಿದೆ.

Tamilnadu Cop: ಬೆಂಗಳೂರಿನಿಂದ ಕೊಯಮತ್ತೂರಿನ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರಿನ ಮೇಲ್ಭಾಗವನ್ನು ಗಟ್ಟಿಯಾಗಿ ಹಿಡಿದು ಸುಮಾರು 40 ಕಿ.ಮೀ ವರೆಗೆ ಡ್ರಗ್ಸ್​ ಕಳ್ಳಸಾಗಣೆ ಮಾಡುತ್ತಿದ್ದ ಕಿಡಿಗೇಡಿಗಳನ್ನು ಬೆನ್ನಟ್ಟಿದ ಪೊಲೀಸ್ ಪೇದೆಯ ಧೈರ್ಯ, ದಿಟ್ಟತನಕ್ಕೆ ಇದೀಗ ತಮಿಳುನಾಡು ಪೊಲೀಸ್​ ಇಲಾಖೆ ಮತ್ತು ನೆಟ್ಟಿಗರಿಂದ ಮೆಚ್ಚುಗೆ, ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿದೆ.

ನೆಟ್ಟಿಗರ ಒಂದು ಡಿಮಾಂಡ್

ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಘಟನೆ ವರದಿಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೋವಿಲ್‌ಪಾಳ್ಯಂ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್‌ ವೇಲ್‌ಮುರುಗನ್‌ ಎಂಬುವವರು ಜೀವದ ಹಂಗನ್ನೂ ತೊರೆದು ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಡಿಗೇಡಿಗಳು ತಪ್ಪಿಸಿಕೊಳ್ಳಬಾರದು ಎಂದು, ಅವರ ಕಾರಿನ ಮೇಲೆ ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದ ವೇಲ್​ಮುರುಗನ್​, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಆರೋಪಿಗಳನ್ನು ಸೆರೆಹಿಡಿದಿದ್ದು ಸದ್ಯ ನೆಟ್ಟಿಗರ ಒಂದು ಡಿಮಾಂಡ್​ಗೆ ಕಾರಣವಾಗಿದೆ.

300 ಕೆಜಿ ಗುಟ್ಕಾ

ವೇಲ್ಮುರುಗನ್ ಮತ್ತು ಸಬ್​ಇನ್ಸ್​ಪೆಕ್ಟರ್ ವಿಘ್ನೇಶ್ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. 300 ಕೆಜಿ ಗುಟ್ಕಾ ಸಾಗಿಸುತ್ತಿದ್ದ ಕರ್ನಾಟಕದ ಕಾರನ್ನು ಅಧಿಕಾರಿಗಳು ತಡೆದರು. ವಾಹನದ ಹಿಂಬದಿಯಲ್ಲಿದ್ದ ವಸ್ತುಗಳನ್ನು ವಿಘ್ನೇಶ್ ಪರಿಶೀಲಿಸುತ್ತಿದ್ದಾಗ ಕಾರಿನಲ್ಲಿದ್ದ ರಾಜಸ್ಥಾನದ ಸ್ಥಳೀಯರು ಆತನನ್ನು ಏಕಾಏಕಿ ನೂಕಿ, ಕಾರಿನ ಎಲ್ಲ ಡೋರ್​ಗಳನ್ನು ಲಾಕ್​ ಮಾಡಿಕೊಂಡು ಸ್ಥಳದಿಂದ ಕಾಲ್ಕಿತರು. ತಕ್ಷಣವೇ ಆರೋಪಿಗಳ ಕಾರಿನ ಮೇಲೆ ಜಿಗಿದ ವೇಲ್ಮುರುಗನ್, ಅತಿವೇಗದಲ್ಲಿ ಚಾಲನೆ ಮಾಡಿದರೂ ಉಡದಂತೆ ಕಾರನ್ನು ಹಿಡಿದಿದ್ದೇ ಈ ರೋಚಕ ಸೆರೆಗೆ ಕಾರಣವಾಗಿದೆ.

ಘಟನೆಯ ಮಾಹಿತಿ ಪಡೆದ ಕರುಮತ್ತಂಪಟ್ಟಿ ಪೊಲೀಸರು ಆಂಬ್ಯುಲೆನ್ಸ್ ಸಹಿತ ವಾಹನವನ್ನು ಹಿಂಬಾಲಿಸಿದ್ದಾರೆ. ಗ್ಯಾಂಗ್ ಆರಂಭದಲ್ಲಿ ಕರುಮತ್ತಂಪಟ್ಟಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಾಗ, ಪೊಲೀಸರು ಅವಿನಾಶಿ ಪೊಲೀಸ್ ಠಾಣೆಗೆ ಅಲರ್ಟ್​ ನೀಡಿದರು. ಅಲ್ಲಿದ್ದ ಅಧಿಕಾರಿಗಳು ಒಟ್ಟಾಗಿ ಚೇಸ್​ ಮಾಡಿದ್ದಾರೆ. ಸುಮಾರು 40 ಕಿ.ಮೀ ಪ್ರಯಾಣಿಸಿದ ನಂತರ, ಅವಿನಾಶಿಯ ಅನ್ನಪೂರ್ಣ ಹೋಟೆಲ್ ಬಳಿ ಕಾರನ್ನು ಅಡ್ಡಗಟ್ಟಿ, ಆರೋಪಿಗಳು ತಪ್ಪಿಸಿಕೊಳ್ಳದಂತೆ ಆಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳು ಸುತ್ತುವರೆಯಿತು ಎಂದು ವರದಿಯಾಗಿದೆ.

ಅಕ್ರಮ ಕಳ್ಳಸಾಗಣೆ

ಆರಂಭದಲ್ಲಿ ಇಬ್ಬರೂ ಓಡಿ ಹೋಗಿದ್ದೇ ಆದರೂ ಕೆಲವೇ ಸಮಯದ ಬಳಿಕ ಆ ಇಬ್ಬರನ್ನು ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಯಿತು. ಮೂವರೂ ರಾಜಸ್ಥಾನ ಮೂಲದವರು ಎನ್ನಲಾಗಿದ್ದು, ಕಾರಿನಲ್ಲಿ 300 ಕೆಜಿ ನಿಷೇಧಿತ ಗುಟ್ಕಾ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗ್ ಬೆಂಗಳೂರಿನಿಂದ ಕೊಯಮತ್ತೂರಿಗೆ ಅಕ್ರಮವಾಗಿ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿತ್ತು ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.

ಇನ್ನು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ, ಮೆಚ್ಚುಗೆಗೆ ಪಾತ್ರವಾದ ಬೆನ್ನಲ್ಲೇ ಪ್ರಾಣವನ್ನೂ ಲೆಕ್ಕಿಸದೆ ಸಾಹಸ ಮೆರೆದ ವೇಲ್ಮುರುಗನ್ ಅವರ ಬೆನ್ನುತಟ್ಟಿದ ನೆಟ್ಟಿಗರು, "ಇವರಿಗೆ ತಮಿಳುನಾಡು ಪೊಲೀಸ್​ ಇಲಾಖೆ ಪ್ರೋಮೋಷನ್​ ಕೊಡಬೇಕು. ಇವರು ಇತರರಿಗೂ ಮಾದರಿ ಹಾಗೂ ಅತ್ಯುತ್ತಮ ಉದಾಹರಣೆಯಾಗಿ ನಿಂತಿದ್ದಾರೆ. ಪೊಲೀಸ್ ಪಡೆ ಹೀಗಿದ್ದರೆ, ನಾಗರಿಕರು ಎಂದಿಗೂ ಭಯಪಡುವ ಅಗತ್ಯವಿಲ್ಲ. ಇಂತಹ ವ್ಯಕ್ತಿಗಳಿಗೆ ತಕ್ಕ ಬಡ್ತಿ ನೀಡಬೇಕು" ಎಂದು ಪಟ್ಟು ಹಿಡಿದಿದ್ದಾರೆ,(ಏಜೆನ್ಸೀಸ್).