ಕುಡಿಯುವ ನೀರಿನ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಮೇಕೆದಾಟು ಯೋಜನೆಯ ವಿಸõತ ಯೋಜನಾ ವರದಿಯನ್ನು (ಡಿಪಿಆರ್) ತಿರಸ್ಕರಿಸುವಂತೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದು ತೀವ್ರ ಖಂಡನೀಯ. ತಮಿಳುನಾಡಿನಲ್ಲಿ ಸರ್ಕಾರಗಳು ಬದಲಾದರೂ, ಕಾವೇರಿ ವಿಷಯದಲ್ಲಿ ಕರ್ನಾಟಕದ ವಿರುದ್ಧ ರಾಜಕೀಯ ಮಾಡುವ ಧೋರಣೆ ಮಾತ್ರ ಬದಲಾಗಿಲ್ಲ ಎಂಬುದಕ್ಕೆ ಈ ಪತ್ರವೇ ಸಾಕ್ಷಿಯಾಗಿದೆ. ನೆರೆ ರಾಜ್ಯದ ಇಂತಹ ಅನಗತ್ಯ ಹಠಮಾರಿ ಧೋರಣೆಯು ಭಾರತದ ಒಕ್ಕೂಟ ವ್ಯವಸ್ಥೆಯ ಸೌಹಾರ್ದತೆಗೆ ಧಕ್ಕೆ ತರುವಂತಹದ್ದಾಗಿದೆ.
ಮೇಕೆದಾಟು ಯೋಜನೆ ಕಾವೇರಿ ತೀರ್ಪಿಗೆ ಅಥವಾ ಯಾವುದೇ ಅಂತಾರಾಜ್ಯ ನದಿ ನೀರಿನ ಹಂಚಿಕೆ ಸೂತ್ರಕ್ಕೆ ವಿರುದ್ಧವಾಗಿಲ್ಲ. ಇದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುವ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶದ ಒಂದು ಸಮತೋಲನ ಜಲಾಶಯದ (ಬ್ಯಾಲೆನ್ಸಿಂಗ್ ರಿಸರ್ವಾಯರ್) ಯೋಜನೆ ಅಷ್ಟೇ. ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ಹರಿದು, ಅಂತಿಮವಾಗಿ ಸಮುದ್ರಕ್ಕೆ ಸೇರಿ ವ್ಯರ್ಥವಾಗುವ ನೂರಾರು ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇಂತಹ ಯೋಜನೆಯಿಂದ ತಮಿಳುನಾಡಿನ ರೈತರಿಗಾಗಲಿ ಅಥವಾ ಅಲ್ಲಿನ ಜನರಿಗಾಗಲಿ ಅನ್ಯಾಯವಾಗುವುದಿಲ್ಲ. ಬದಲಿಗೆ, ಬರಗಾಲದ ಸಂದರ್ಭದಲ್ಲಿ ತಮಿಳುನಾಡಿಗೆ ನಿಗದಿತ ನೀರನ್ನು ಹರಿಸಲು ಈ ಜಲಾಶಯವು ಕರ್ನಾಟಕಕ್ಕೆ ನೆರವಾಗಲಿದೆ ಎಂಬ ಸತ್ಯವನ್ನು ತಮಿಳುನಾಡು ಸರ್ಕಾರ ಉದ್ದೇಶಪೂರ್ವಕವಾಗಿಯೇ ಮರೆಮಾಚುತ್ತಿದೆ.
ರಾಜಕೀಯ ಲಾಭಕ್ಕಾಗಿ ಮತ್ತು ಪ್ರಾದೇಶಿಕ ಭಾವನೆಗಳನ್ನು ಕೆರಳಿಸಲು ತಮಿಳುನಾಡು ಸರ್ಕಾರ ಪ್ರತಿ ಬಾರಿಯೂ ಮೇಕೆದಾಟು ವಿಷಯದಲ್ಲಿ ಹಠಮಾರಿ ಧೋರಣೆ ತಳೆಯುತ್ತಾ ಬಂದಿದೆ. ತನ್ನ ನೆಲದಲ್ಲಿ ಕುಡಿಯುವ ನೀರಿನ ಭದ್ರತೆಗಾಗಿ ಯೋಜನೆ ರೂಪಿಸುವುದು ಕರ್ನಾಟಕದ ಹಕ್ಕು. ಈ ನಿಟ್ಟಿನಲ್ಲಿ, ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶವು ಕರ್ನಾಟಕದ ನಿಲುವಿಗೆ ಮತ್ತಷ್ಟು ಬಲ ತಂದಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕಾನೂನು ಚೌಕಟ್ಟಿನೊಳಗೆ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ರ್ಚಚಿಸಲು ಮುಂದುವರಿಯಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ತಮಿಳುನಾಡು ಹೂಡಿದ್ದ ಕಾನೂನು ತಗಾದೆಗಳನ್ನು ಬದಿಗಿಟ್ಟು ಸವೋಚ್ಚ ನ್ಯಾಯಾಲಯ ನೀಡಿರುವ ಈ ಆದೇಶವು, ಕರ್ನಾಟಕಕ್ಕೆ ಸಿಕ್ಕ ದೊಡ್ಡ ನೈತಿಕ ಮತ್ತು ಕಾನೂನು ಜಯವಾಗಿದೆ. ಈ ಆದೇಶದ ಬಳಿಕವಾದರೂ ತಮಿಳುನಾಡು ತನ್ನ ಪೂರ್ವಾಗ್ರಹ ಪೀಡಿತ ನಿಲುವನ್ನು ಬಿಡಬೇಕಾಗಿದೆ.
ಕೇಂದ್ರ ಸರ್ಕಾರವು ತಮಿಳುನಾಡಿನ ಈ ರಾಜಕೀಯ ಪ್ರೇರಿತ ಒತ್ತಡಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು. ಕಾವೇರಿ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನ್ವಯ ಮೇಕೆದಾಟು ಯೋಜನೆಗೆ ತಕ್ಷಣವೇ ಪರಿಸರ ಮತ್ತು ತಾಂತ್ರಿಕ ಅನುಮತಿಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ. ರಾಷ್ಟ್ರದ ರಾಜಧಾನಿಯಲ್ಲಿ ಕರ್ನಾಟಕದ ಸಂಸದರು ಮತ್ತು ಸಚಿವರು ಒಗ್ಗಟ್ಟಿನಿಂದ ಈ ನಿಟ್ಟಿನಲ್ಲಿ ಒತ್ತಡ ಹೇರಬೇಕಾದ ತುರ್ತು ಅಗತ್ಯವಿದೆ.