ತಮಿಳುನಾಡಿಗೆ 13 ಲಕ್ಷ ಕೋಟಿ ಸಾಲದ ಹೊರೆ: ಡಿಎಂಕೆ ಸರ್ಕಾರದ ವಿರುದ್ಧ ಸಿಎಂ ವಿಜಯ್ ಸರ್ಕಾರದಿಂದ ಆಘಾತಕಾರಿ ಶ್ವೇತಪತ್ರ ಬಿಡುಗಡೆ!
ಚೆನ್ನೈ: ತಮಿಳುನಾಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಭಾರಿ ಸಾಲದ ಸುಳಿಗೆ ಸಿಲುಕಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ತಮಿಳಗ ವೆಟ್ರಿ ಕಳಗಂ ಪಕ್ಷದ ನೂತನ ಸರ್ಕಾರವು ಮಂಗಳವಾರ ರಾಜ್ಯದ ಹಣಕಾಸು(Tamil Nadu Debt) ಸ್ಥಿತಿಗತಿಯ ಕುರಿತು ಬಹುನಿರೀಕ್ಷಿತ ಶ್ವೇತಪತ್ರವನ್ನು ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಹಿಂದಿನ DMK ಸರ್ಕಾರವೇ ಈ ಆರ್ಥಿಕ ದುಸ್ಥಿತಿಗೆ ನೇರ ಹೊಣೆ ಎಂದು ಶ್ವೇತಪತ್ರದಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.
ಸಚಿವಾಲಯದಲ್ಲಿ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್, ರಾಜ್ಯವು ಹಿಂದೆಂದೂ ಕಾಣದ ಆರ್ಥಿಕ ಹೊರೆಯನ್ನು ಹೊರುತ್ತಿದೆ. ಹೆಚ್ಚುತ್ತಿರುವ ಸಾಲ, ದಿನೇದಿನೇ ಹೆಚ್ಚಾಗುತ್ತಿರುವ ಆದಾಯದ ಕೊರತೆ ಸಾರ್ವಜನಿಕ ಹಣಕಾಸು ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ರಾಜ್ಯದ ಆರ್ಥಿಕ ಸ್ಥಿತಿಯನ್ನು ಜನರ ಮುಂದೆ ಇಡುವುದಾಗಿ ಟಿವಿಕೆ ಸಂಸ್ಥಾಪಕ ಮತ್ತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೀಡಿದ್ದ ಪ್ರಮುಖ ಭರವಸೆಯನ್ನು ಈ ಶ್ವೇತಪತ್ರದ ಮೂಲಕ ಈಡೇರಿಸಲಾಗಿದೆ.
10 ಲಕ್ಷ ಕೋಟಿ ರೂಪಾಯಿಗಳ ಹತ್ತಿರಕ್ಕೆ ತಲುಪಿದ ತಮಿಳುನಾಡಿನ ಸಾಲ!
ಶ್ವೇತಪತ್ರದ ವರದಿಯ ಪ್ರಕಾರ, ತಮಿಳುನಾಡಿನ ನೇರ ಸಾಲವು ಬರೋಬ್ಬರಿ 10 ಲಕ್ಷ ಕೋಟಿ ರೂಪಾಯಿಗಳ ಸನಿಹಕ್ಕೆ ಬಂದು ನಿಂತಿದೆ. ಕೇವಲ ಐದು ವರ್ಷಗಳ ಹಿಂದೆ ಸುಮಾರು 4.8 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಸಾಲ, ಡಿಎಂಕೆ ಅವಧಿಯಲ್ಲಿ ದುಪ್ಪಟ್ಟಾಗಿದೆ. ಇಷ್ಟೇ ಅಲ್ಲದೆ, ಬಜೆಟ್ ಹೊರತಾದ ಸಾಲಗಳು, ಸರ್ಕಾರಿ ಗ್ಯಾರಂಟಿಗಳು ಮತ್ತು ಇತರ ಹೊಣೆಗಾರಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ರಾಜ್ಯದ ಒಟ್ಟು ಆರ್ಥಿಕ ಹೊರೆ ಅಂದಾಜು 13.18 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಪ್ರಸ್ತುತ ತಮಿಳುನಾಡು 78,324 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆಯನ್ನು ಎದುರಿಸುತ್ತಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮಟ್ಟವಾಗಿದೆ ಎಂದು ಹಣಕಾಸು ಸಚಿವರು ವಿವರಿಸಿದ್ದಾರೆ.
60 ವರ್ಷಗಳ ಸಾಲವನ್ನು ಕೇವಲ 5 ವರ್ಷದಲ್ಲೇ ಮೀರಿದ ಡಿಎಂಕೆ ಆಡಳಿತ!
ವರದಿಯಲ್ಲಿರುವ ಅತ್ಯಂತ ಆಘಾತಕಾರಿ ಅಂಶವೆಂದರೆ, ಕಳೆದ ಐದು ವರ್ಷಗಳ ಡಿಎಂಕೆ ಆಡಳಿತದಲ್ಲಿ ಮಾಡಲಾದ ಸಾಲವು, ತಮಿಳುನಾಡು ರಾಜ್ಯವು ಕಳೆದ 60 ವರ್ಷಗಳಲ್ಲಿ ಮಾಡಿದ್ದ ಒಟ್ಟು ಸಾಲಕ್ಕಿಂತಲೂ ಹೆಚ್ಚಾಗಿದೆ. ಈ ಬೃಹತ್ ಮೊತ್ತದ ಸಾಲವನ್ನು ದೀರ್ಘಕಾಲದ ಮೂಲಸೌಕರ್ಯ ಅಭಿವೃದ್ಧಿ ಅಥವಾ ಉತ್ಪಾದನಾ ವಲಯಗಳಲ್ಲಿ ಹೂಡಿಕೆ ಮಾಡುವ ಬದಲಾಗಿ, ಸರ್ಕಾರದ ದೈನಂದಿನ ಮತ್ತು ಸಾಮಾನ್ಯ ವೆಚ್ಚಗಳನ್ನು ಸರಿದೂಗಿಸಲು ಬಳಸಲಾಗಿದೆ ಎಂದು ಸಚಿವ ವಿಲ್ಸನ್ ಆರೋಪಿಸಿದ್ದಾರೆ. ಇದು ಹಿಂದಿನ ಸರ್ಕಾರದ ಹಣಕಾಸು ನಿರ್ವಹಣೆ ಮತ್ತು ಆದ್ಯತೆಗಳ ಕುರಿತು ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಹುಟ್ಟುವ ಪ್ರತಿ ಮಗುವಿನ ತಲೆಯ ಮೇಲೂ 1.28 ಲಕ್ಷ ರೂ. ಸಾಲದ ಹೊರೆ!
ಹಣಕಾಸು ಸ್ಥಿತಿಗತಿ ವರದಿಯ ಅಂದಾಜಿನ ಪ್ರಕಾರ, ತಮಿಳುನಾಡಿನಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ಸಹ ಹುಟ್ಟುತ್ತಲೇ ಅಂದಾಜು 1.28 ಲಕ್ಷ ರೂಪಾಯಿಗಳ ಸಾಲದ ಹೊರೆಯನ್ನು ಹೊತ್ತುಕೊಂಡು ಬರುತ್ತಿದೆ. ಸಾಲದ ಮೇಲಿನ ಬಡ್ಡಿ ಪಾವತಿಯ ವೆಚ್ಚವೇ ದಿನೇದಿನೇ ಹೆಚ್ಚಾಗುತ್ತಿರುವುದು ರಾಜ್ಯದ ಆರ್ಥಿಕತೆಯ ಸುಸ್ಥಿರತೆಗೆ ಭಾರಿ ಧಕ್ಕೆ ತಂದಿದೆ. ತಮಿಳುನಾಡು ಸರ್ಕಾರ ಗಳಿಸುವ ಪ್ರತಿ ಒಂದು ರೂಪಾಯಿ ಆದಾಯದಲ್ಲಿ ಸುಮಾರು 22.8 ಪೈಸೆಯಷ್ಟು ಹಣ ಕೇವಲ ಹಳೇ ಸಾಲದ ಬಡ್ಡಿ ತೀರಿಸಲು ವಿನಿಯೋಗವಾಗುತ್ತಿದೆ. ಇದರಿಂದಾಗಿ ರಾಜ್ಯದ ಕಲ್ಯಾಣ ಯೋಜನೆಗಳು ಮತ್ತು ಹೊಸ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಎದುರಾಗುತ್ತಿದೆ.
ಪ್ರಮುಖ ರಾಜ್ಯಗಳಿಗಿಂತ ತಮಿಳುನಾಡು ತೀರಾ ಹಿಂದುಳಿದಿದೆ
ದೇಶದ ಇತರ ಪ್ರಮುಖ ಆರ್ಥಿಕ ಶಕ್ತಿಯುಳ್ಳ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂಬುದನ್ನು ಶ್ವೇತಪತ್ರದಲ್ಲಿ ಅಂಕಿ-ಅಂಶಗಳ ಸಮೇತ ಸಾಬೀತುಪಡಿಸಲಾಗಿದೆ. ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ ಹೋಲಿಸಿದರೆ ಸಾಲದ ಅನುಪಾತವು ತಮಿಳುನಾಡಿನಲ್ಲಿ ಶೇ. 28.3 ರಷ್ಟಿದೆ. ಆದರೆ, ಗುಜರಾತ್‌ನಲ್ಲಿ ಇದು ಶೇ. 17.6, ಮಹಾರಾಷ್ಟ್ರದಲ್ಲಿ ಶೇ. 19.7 ಮತ್ತು ನೆರೆಯ ಕರ್ನಾಟಕದಲ್ಲಿ ಶೇ. 23.4 ರಷ್ಟಿದೆ. ಈ ಹೋಲಿಕೆಯು ತಮಿಳುನಾಡು ಎಷ್ಟು ತೀವ್ರ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಈ ಶ್ವೇತಪತ್ರದ ಆಧಾರದ ಮೇಲೆ ಮುಂದಿನ ಆರ್ಥಿಕ ಸುಧಾರಣೆಗಳು, ವೆಚ್ಚದ ತರ್ಕಬದ್ಧಗೊಳಿಸುವಿಕೆ ಮತ್ತು ಸಾಲ ನಿರ್ವಹಣೆಗೆ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದೆ,(ಏಜೆನ್ಸೀಸ್).