ಸಿಎಂ ವಿಜಯ್ ಮತ್ತು ಎಂ.ಕೆ.ಸ್ಟಾಲಿನ್  
ದೇಶ

ತಮಿಳುನಾಡಿನ ಟಿವಿಕೆ ಸರ್ಕಾರ ಬಿಜೆಪಿಯ ಜೆರಾಕ್ಸ್ ಕಾಪಿ: ಸಿಎಂ ವಿಜಯ್ ವಿರುದ್ಧ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ವಾಗ್ದಾಳಿ | M K Stalin

ಚೆನ್ನೈ: ಎಐಎಡಿಎಂಕೆ ಶಾಸಕರು ಮತ್ತು ಮಾಜಿ ಶಾಸಕರನ್ನು ತನ್ನ ಪಕ್ಷಕ್ಕೆ ಸೆಳೆದುಕೊಳ್ಳುತ್ತಿರುವ ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್ ವಿರುದ್ಧ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್(M K Stalin) ವಾಗ್ದಾಳಿ ನಡೆಸಿದ್ದು, ಟಿವಿಕೆ ಸರ್ಕಾರ ಬಿಜೆಪಿಯ ಜೆರಾಕ್ಸ್ ಕಾಪಿಯ ರೀತಿ ವರ್ತಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಡಿಎಂಕೆ ಮುಖ್ಯ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಡಿಎಂಕೆ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲು ಸರ್ಕಾರ ಕಾಪಾಡಿಕೊಳ್ಳಲು ಎಐಎಡಿಎಂಕೆ ಶಾಸಕರನ್ನು ತಮ್ಮ ಪರ ಮತ ಚಲಾಯಿಸುವಂತೆ ಮಾಡಿದರು. ಬಳಿಕ ಅವರನ್ನು ರಾಜೀನಾಮೆ ಕೊಡಿಸಿ ಮರು ಕ್ಷಣವೇ ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು ಎಂದಿದ್ದಾರೆ.
ವಿರೋಧ ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನದ ಭಾಗವಾಗಿ ಎಐಎಡಿಎಂಕೆ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ. ತಮ್ಮ ಸ್ವಂತ ಪಕ್ಷದ ಕಾರ್ಯಕರ್ತರ ಮೇಲೆ ತಮಗೆ ನಂಬಿಕೆಯಿಲ್ಲ. ಮತ್ತು ಬಿಜೆಪಿ ಇತರ ರಾಜ್ಯಗಳಲ್ಲಿ ಮಾಡುತ್ತಿರುವಂತೆಯೇ ಸಿಎಂ ವಿಜಯ್ ಇಲ್ಲಿಯೂ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಸ್ಟಾಲಿನ್, ಡಿಎಂಕೆ ಜವಾಬ್ದಾರಿಯುತ ಮತ್ತು ಜಾಗರೂಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ. ಆಡಳಿತ ಪಕ್ಷಕ್ಕೆ ಮತ ಹಾಕಿದ ಜನರು ಈಗ ಹೆಚ್ಚುತ್ತಿರುವ ಅಪರಾಧಗಳು, ವಿದ್ಯುತ್ ಕಡಿತ ಸೇರಿ ಒಟ್ಟಾರೆ ಆಡಳಿತದ ಬಗ್ಗೆ ನಿರಾಸೆವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ನೀತಿ ಆಯೋಗ ಸಭೆಯಲ್ಲಿ ತಮಿಳುನಾಡಿನ ಹಕ್ಕುಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಡಿಎಂಕೆ ಸರ್ಕಾರವು ಈ ಹಿಂದೆ ಎತ್ತಿದ್ದ ಹಲವಾರು ಬೇಡಿಕೆಗಳು ಮತ್ತು ನೀತಿ ನಿಲುವುಗಳನ್ನು ವಿಜಯ್ ಪುನರುಚ್ಚರಿಸಿದ್ದಾರೆ. ಮತ್ತು ಡಿಎಂಕೆ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).