AIADMK Leaders Join TVK> ವಿಜಯ್ ಸರ್ಕಾರ ಬೆಂಬಲಿಸಿ ಟಿವಿಕೆ ಸೇರಿದ 300ಕ್ಕೂ ಹೆಚ್ಚು ನಾಯಕರು!  
ದೇಶ

ಎಐಎಡಿಎಂಕೆಗೆ ಬಿಗ್ ಶಾಕ್: ವಿಜಯ್ ಸರ್ಕಾರ ಬೆಂಬಲಿಸಿ ಟಿವಿಕೆ ಸೇರಿದ 300ಕ್ಕೂ ಹೆಚ್ಚು ನಾಯಕರು! | AIADMK Leaders Join TVK

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಶನಿವಾರ ಮತ್ತೊಂದು ಬೃಹತ್ ಪಕ್ಷಾಂತರ ನಡೆದಿದ್ದು, ಪ್ರಸ್ತುತ ಎಐಎಡಿಎಂಕೆಯ ನಾಯಕತ್ವದಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ, ಪಕ್ಷದ 300ಕ್ಕೂ ಹೆಚ್ಚು ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು (AIADMK Leaders Join TVK) ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಚೆನ್ನೈ ಸಮೀಪದ ಪಣೈಯೂರ್‌ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ಈ ಬೃಹತ್ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಎಐಎಡಿಎಂಕೆಯ ಮಾಜಿ ಸಚಿವರಾದ ಎಂ.ಸಿ. ಸಂಪತ್, ಎನ್.ಆರ್. ಶಿವಪತಿ, ಕಡಂಬೂರ್ ಸಿ. ರಾಜು, ಉಡುಮಲೈ ಕೆ. ರಾಧಾಕೃಷ್ಣನ್, ವೆಲ್ಲಮಂಡಿ ಎನ್. ನಟರಾಜನ್, ಮೈಲಾಪುರದ ಮಾಜಿ ಶಾಸಕ ಆರ್. ನಟರಾಜ್, ಪರಮಕುಡಿಯ ಮಾಜಿ ಶಾಸಕ ಸಾಧನ್ ಪ್ರಭಾಕರ್, ಅಣ್ಣಾ ಕಾರ್ಮಿಕ ಸಂಘದ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕಮಲಕ್ಕಣ್ಣನ್, ತಿರುಪತ್ತೂರು ನಗರ ಕಾರ್ಯದರ್ಶಿ ಡಿ.ಟಿ. ಕುಮಾರ್ ಸೇರಿದಂತೆ ಹಲವು ಹಿರಿಯ ನಾಯಕರು ಸೇರಿದ್ದಾರೆ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಎನ್. ಆನಂದ್, ಸಚಿವ ಸೆಂಗೊಟ್ಟೈಯನ್ ಮತ್ತು ಲೋಕೋಪಯೋಗಿ ಸಚಿವ ಆಧವ್ ಅರ್ಜುನ ಅವರ ಸಮ್ಮುಖದಲ್ಲಿ ಈ ಎಲ್ಲಾ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಎಐಎಡಿಎಂಕೆಯ ಬಿಕ್ಕಟ್ಟನ್ನು ಬಿಚ್ಚಿಟ್ಟ ಹಿರಿಯ ನಾಯಕರು

ಟಿವಿಕೆ ಸೇರಿದ ಬಳಿಕ ಮಾತನಾಡಿದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಉಡುಮಲೈ ರಾಧಾಕೃಷ್ಣನ್, ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ನಾಯಕತ್ವವನ್ನು ಸ್ಮರಿಸಿದ್ದಾರೆ. ಅಮ್ಮ ಇದ್ದಾಗ ಪಕ್ಷದಲ್ಲಿ ಕಟ್ಟುನಿಟ್ಟಿನ ಶಿಸ್ತಿತ್ತು. ಅವರ ಅಗಲಿಕೆ ಎಐಎಡಿಎಂಕೆಗೆ ತುಂಬಲಾರದ ನಷ್ಟವಾಯಿತು. ಕಳೆದ ಐದು ವರ್ಷಗಳಿಂದ ನಾವು ಪಕ್ಷದಲ್ಲಿದ್ದರೂ, ಸಾರ್ವಜನಿಕರಿಗೆ ಮುಕ್ತವಾಗಿ ಸೇವೆ ಸಲ್ಲಿಸಲು ಆಗದಂತಹ ಕಠಿಣ ಪರಿಸ್ಥಿತಿಯಿತ್ತು ಎಂದರು.
ಈಗಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ನಾಯಕತ್ವದಲ್ಲಿ ನಮಗೆ ಎಂಜಿಆರ್ ಮತ್ತು ಜಯಲಲಿತಾ ಅವರ ಆದರ್ಶಗಳು ಕಾಣಿಸುತ್ತಿವೆ. ಇಲ್ಲಿ ನಮಗೆ ಸಿಕ್ಕ ಗೌರವ ಮತ್ತು ಮನ್ನಣೆ ನಮ್ಮ ನಿರ್ಧಾರಕ್ಕೆ ಪ್ರೇರಣೆಯಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವ ಪೀಳಿಗೆಯ ನಾಯಕರನ್ನು ಬೆಂಬಲಿಸಿ, ಪಕ್ಷದ ಯಶಸ್ಸಿಗಾಗಿ ತಾವೆಲ್ಲರೂ ಪೂರ್ಣ ಹೃದಯದಿಂದ ಶ್ರಮಿಸುವುದಾಗಿ ಅವರು ತಿಳಿಸಿದರು.

ವಿಜಯ್ ಅವರೇ ತಮಿಳುನಾಡಿನ ಖಾಯಂ ಸಿಎಂ; ಸಚಿವ ಸೆಂಗೊಟ್ಟೈಯನ್

ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಸೆಂಗೊಟ್ಟೈಯನ್, ಟಿವಿಕೆಯ ಅಭೂತಪೂರ್ವ ಬೆಳವಣಿಗೆಯನ್ನು ಕೊಂಡಾಡಿದರು. ಭಾರತೀಯ ರಾಜಕೀಯ ಇತಿಹಾಸದಲ್ಲೇ ಪಕ್ಷ ಸ್ಥಾಪನೆಯಾದ ಕೇವಲ ಎರಡೇ ವರ್ಷಗಳಲ್ಲಿ ಇಷ್ಟು ದೊಡ್ಡ ಯಶಸ್ಸು ಗಳಿಸಿದ ಮತ್ತೊಂದು ಚಳವಳಿ ಇಲ್ಲ. ತಮಿಳುನಾಡಿನ ಜನತೆ ಮುಖ್ಯಮಂತ್ರಿ ವಿಜಯ್ ಅವರ ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸಿದ್ದಾರೆ. ಇಲ್ಲಿ ಯಾರು ಎಷ್ಟೇ ಮೈತ್ರಿ ಮಾಡಿಕೊಂಡರೂ, ತಮಿಳು ಮಣ್ಣಿನಲ್ಲಿ ಹುಟ್ಟಿದ ಯಾರೂ ನಮ್ಮ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ. ಸ್ವಚ್ಛ ಆಡಳಿತ ನೀಡಬಲ್ಲ ನಾಯಕನನ್ನು ಜನ ಒಪ್ಪಿಕೊಂಡಿದ್ದಾರೆ. ನಾಳೆಯಷ್ಟೇ ಅಲ್ಲ, ಮುಂದೆಯೂ ವಿಜಯ್ ಅವರೇ ತಮಿಳುನಾಡಿನ ಖಾಯಂ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾರಿಗೂ ಯಾವುದೇ ಆಮಿಷ ಒಡ್ಡಿಲ್ಲ: ಆಧವ್ ಅರ್ಜುನ ಸ್ಪಷ್ಟನೆ

ಸಚಿವ ಆಧವ್ ಅರ್ಜುನ ಮಾತನಾಡಿ, ಶಾಸಕರು ಹಾಗೂ ನಾಯಕರನ್ನು ಆಮಿಷಗಳ ಮೂಲಕ ಪಕ್ಷಕ್ಕೆ ಸೆಳೆಯಲಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ನಾವು ಯಾವುದೇ ಆಮಿಷಗಳನ್ನು ಒಡ್ಡಿ ಯಾರನ್ನೂ ಟಿವಿಕೆಗೆ ಆಹ್ವಾನಿಸಿಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ನಾವು ಒಂದೇ ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೇವೆ ಎಂದರು. ಎಐಎಡಿಎಂಕೆಯಲ್ಲಿ ಹೆಚ್ಚುತ್ತಿರುವ ವಲಸೆಗೆ ಅದರ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನಾಯಕತ್ವದ ವೈಫಲ್ಯವೇ ಕಾರಣ ಎಂದು ಟೀಕಿಸಿದ ಆಧವ್​​, ಓ. ಪನ್ನೀರ್‌ಸೆಲ್ವಂ ಡಿಎಂಕೆ ಜೊತೆ ಕೈಜೋಡಿಸಿರುವುದನ್ನು ಖಂಡಿಸಿದರು. ಅಲ್ಲದೆ, ಇನ್ನೂ ಕೇವಲ ಒಂದು ತಿಂಗಳೊಳಗೆ ಎಐಎಡಿಎಂಕೆಯ ಶೇಕಡಾ 90 ರಷ್ಟು ಸದಸ್ಯರು ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಸೇರಲಿದ್ದಾರೆ ಎಂದು ಭವಿಷ್ಯ ನುಡಿದರು(ಏಜೆನ್ಸೀಸ್​).