AIADMK alliance | ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ 
ದೇಶ

ಡಿಎಂಕೆ ಮಣಿಸಲು ಇಪಿಎಸ್ ಮಾಸ್ಟರ್ ಪ್ಲ್ಯಾನ್; ಟಿವಿಕೆ ಬಾವುಟ ಕಂಡು ಪಳನಿಸ್ವಾಮಿ ನೀಡಿದ್ರು 'ಶುಭಾರಂಭ'ದ ಹೇಳಿಕೆ | AIADMK alliance

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ರಾಜಕೀಯ ಅಖಾಡ ಈಗಲೇ ಸಿದ್ಧವಾಗುತ್ತಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನೀಡುತ್ತಿರುವ ಸುಳಿವುಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ. ಅದರಲ್ಲೂ ಪ್ರಮುಖವಾಗಿ ನಟ ವಿಜಯ್ ನೇತೃತ್ವದ ಟಿವಿಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಹರಡಿರುವ ಸುದ್ದಿ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.
ಇತ್ತೀಚೆಗೆ ಕುಮಾರಪಾಳಯಂನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ್ದ ಎಡಪ್ಪಾಡಿ ಪಳನಿಸ್ವಾಮಿ, ಸಾರ್ವಜನಿಕರ ಕೈಯಲ್ಲಿದ್ದ ಟಿವಿಕೆ ಪಕ್ಷದ ಬಾವುಟಗಳನ್ನು ಗಮನಿಸಿ, ಇದು ಶುಭಾರಂಭದ ಸಂಕೇತ ಎಂದು ಕರೆದಿದ್ದರು. ಈ ಹೇಳಿಕೆ ಕೇವಲ ಕಾಕತಾಳೀಯವಲ್ಲ, ಬದಲಾಗಿ ಡಿಎಂಕೆ ವಿರೋಧಿ ಮತಗಳನ್ನು ಒಗ್ಗೂಡಿಸಲು ಇಪಿಎಸ್ ಹಾಕುತ್ತಿರುವ ಬಲೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತಾರೂಢ ಡಿಎಂಕೆಯನ್ನು ಸೋಲಿಸಲು ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಂದಾಗಬೇಕು ಎಂಬ ಮಾತನ್ನು ಪಳನಿಸ್ವಾಮಿ ಪುನರುಚ್ಛರಿಸುತ್ತಿರುವುದು ಟಿವಿಕೆ ಜೊತೆಗಿನ ಮೈತ್ರಿಗೆ ಇಂಬು ನೀಡಿದೆ.

ಟಿವಿಕೆ ಹೇಳುವುದೇನು..?

ಮೈತ್ರಿ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿರುವ ಟಿವಿಕೆ ವಕ್ತಾರ ಫೆಲಿಕ್ಸ್ ಗೆರಾಲ್ಡ್, ಎಐಎಡಿಎಂಕೆ ಅಥವಾ ಬಿಜೆಪಿ ಜೊತೆ ಕೈಜೋಡಿಸುವ ಆಲೋಚನೆ ಇಲ್ಲ, ಮುಂಬರುವ ಚುನಾವಣೆಯಲ್ಲಿ ನಾವು ಪ್ರಮುಖ ಆಟಗಾರರಾಗಿದ್ದು, ಯಾರು ಬೇಕಾದರೂ ನಮ್ಮೊಂದಿಗೆ ಸೇರಬಹುದು ಮತ್ತು ನಾವು ಅಧಿಕಾರ ಹಂಚಿಕೊಳ್ಳಲು ಸಿದ್ಧರಿದ್ದೇವೆ, ಆದರೆ, ನಮ್ಮ ನಾಯಕ ವಿಜಯ್ ಮೈತ್ರಿಕೂಟದ ಮುಖ್ಯಮಂತ್ರಿ ಮುಖವಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಿಲುವು

ಬಿಜೆಪಿ ನಾಯಕ ನಾರಾಯಣನ್ ತಿರುಪತಿ ಮಾತನಾಡಿದ್ದು, ಆಡಳಿತಾರೂಢ ಡಿಎಂಕೆಯನ್ನು ವಿರೋಧಿಸುವ ಪಕ್ಷಗಳು ಎನ್‌ಡಿಎ ಬ್ಯಾನರ್ ಅಡಿಯಲ್ಲಿ ಒಂದಾಗುವಂತೆ ಮನವಿ ಮಾಡಿದ್ದಾರೆ.

ಸಿಬಿಐ ವಿಚಾರಣೆ

ಕರೂರ್​ ಕಾಲ್ತುಳಿತ ದುರಂತದ ವಿಷಯವಾಗಿ ಸಿಬಿಐ ವಿಚಾರಣೆಯ ಬಳಿಕ ವಿಜಯ್ ದೆಹಲಿಯಿಂದ ಹೊರಡುವಾಗ ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದ್ದು, ಇದು ಅವರ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಇರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು.
ತಮಿಳುನಾಡಿನ ದೀರ್ಘಕಾಲದಿಂದ ಪ್ರಾಬಲ್ಯ ಹೊಂದಿರುವ ದ್ರಾವಿಡ ಪಕ್ಷಗಳಿಂದ ಭ್ರಮನಿರಸನಗೊಂಡಿರುವ ಯುವ ಮತದಾರರು ವಿಜಯ್​ರನ್ನು ಬೆಂಬಲಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಸುಮಂತ್ ಸಿ ರಾಮನ್ ಅಭಿಪ್ರಾಯಪಟ್ಟಿದ್ದು, ಟಿವಿಕೆ ಸಭೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಾರೆ, ಆದರೆ, ಚಲನಚಿತ್ರ ಆಕರ್ಷಣೆ ಮತಗಳಾಗಿ ಪರಿವರ್ತನೆಯಾಗುತ್ತವೆಯೇ ಕಾದು ನೋಡಬೇಕಾಗಿದೆ ಎಂದರು(ಏಜೆನ್ಸೀಸ್​).