Karur Stampede  
ದೇಶ

Karur Stampede | ನಾವು ಸಮರ್ಥರು....ಸಿಬಿಐ ತನಿಖೆಯ ಮಧ್ಯಂತರ ಆದೇಶ ರದ್ದುಗೊಳಿಸಿ: ಸುಪ್ರೀಂಗೆ ತಮಿಳುನಾಡು ಸರ್ಕಾರದ ಮನವಿ

ಚೆನ್ನೈ: ತಮಿಳುನಾಡಿನ ಕರೂರ್​ನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದ ಮಧ್ಯಂತರ ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್​​ಗೆ ಮನವಿ ಮಾಡಿರುವ ತಮಿಳುನಾಡು ಸರ್ಕಾರ, ರಾಜ್ಯದ ಎಸ್‌ಐಟಿ ನ್ಯಾಯಯುತ ತನಿಖೆ ನಡೆಸಲು ಸಮರ್ಥವಾಗಿದೆ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ರಾಜ್ಯ ಸರ್ಕಾರ, ರಾಜ್ಯದ ವಾದವನ್ನು ಆಲಿಸದೆ ಗೃಹ ಇಲಾಖೆಯು ತನಿಖೆಯನ್ನು ಕೇಂದ್ರ ಸಂಸ್ಥೆಗೆ ವರ್ಗಾಯಿಸುವ ಆದೇಶವನ್ನು ಅಂಗೀಕರಿಸಲಾಗಿದೆ. ಇದು ನಿರ್ವಹಣಾ ಸಾಮರ್ಥ್ಯದ ಪ್ರಶ್ನೆಯನ್ನು ನಿರ್ಧರಿಸುವ ಮೊದಲೇ ರಿಟ್ ಅರ್ಜಿಯನ್ನು ಅನುಮತಿಸಿದಂತೆ ಎಂದು ವಾದಿಸಿದೆ.
ರಾಜ್ಯದ ಪೊಲೀಸರು ಮತ್ತು ಮದ್ರಾಸ್ ಹೈಕೋರ್ಟ್ ರಚಿಸಿದ ಎಸ್‌ಐಟಿ ಅತ್ಯಂತ ಶ್ರದ್ಧೆ, ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿದೆ, 606 ಸಿಬ್ಬಂದಿ, ಸಂಚಾರ ನಿರ್ವಹಣಾ ಕ್ರಮಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳ ಅನುಸರಣೆಯನ್ನು ಒಳಗೊಂಡ ವಿವರವಾದ ಬಂದೋಬಸ್ತ್ ಯೋಜನೆಯನ್ನು ಸರ್ಕಾರ ಉಲ್ಲೇಖಿಸಿದೆ.

ನಿರ್ಲಕ್ಷ್ಯದ ಆರೋಪ ಆಧಾರರಹಿತ...

ಸೆಪ್ಟೆಂಬರ್ 27 ರಂದು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್​ರ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿ, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಾಜ್ಯ ಸರ್ಕಾರವು ಪ್ರಮುಖ ಅರ್ಜಿದಾರರಾದ ಜಿ.ಎಸ್. ಮಣಿ ಅವರ ವಿರುದ್ಧ ರಾಜಕೀಯ ಪ್ರೇರಿತ ಮೊಕದ್ದಮೆಗಳು ಹೂಡಲಾಗಿದೆ ಎಂದು ಆರೋಪಿಸಿತು ಮತ್ತು ಹೈಕೋರ್ಟ್‌ನ ಇದೇ ರೀತಿಯ ನಿರ್ದೇಶನಗಳನ್ನು ಆಕ್ಷೇಪಿಸಿದ ಬಳಿಕ ಟಿವಿಕೆ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಟಿ ತನಿಖೆಯನ್ನು ಪ್ರಶ್ನಿಸುವ ಮೂಲಕ ಫೋರಂ ಶಾಪಿಂಗ್​​ನಲ್ಲಿ ತೊಡಗಿದೆ ಎಂದು ಹೇಳಿದರು.
ಎಫ್‌ಐಆರ್‌ನಲ್ಲಿ ಆರೋಪಿಯಾಗಿ ಹೆಸರಿಸಲಾದ ಟಿವಿಕೆ ಸದಸ್ಯ ಅಧವ್ ಅರ್ಜುನ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೋರಲು ಸಾಧ್ಯವಿಲ್ಲ ಎಂದಿದ್ದು, ಸಿಬಿಐ ತನಿಖೆಗೆ ಕೋರಿಕೆಗಳನ್ನು ಹೈಕೋರ್ಟ್ ಈಗಾಗಲೇ ಪರಿಗಣಿಸಿದೆ ಮತ್ತು ಸಮತೋಲಿತ ಎಸ್‌ಐಟಿ ನೇತೃತ್ವದ ತನಿಖೆಗೆ ನಿರ್ಧರಿಸಿದೆ, ಅದನ್ನು ಈಗ ಸುಪ್ರೀಂ ಕೋರ್ಟ್ ಮುಂದೆ ಮತ್ತೆ ತೆರೆಯಲು ಸಾಧ್ಯವಿಲ್ಲ ಎಂದು ಸರ್ಕಾರ ಉಲ್ಲೇಖಿಸಿದೆ.
ಐಪಿಎಸ್ ಅಧಿಕಾರಿಯಾಗಿರುವ ಎಸ್‌ಐಟಿ ಮುಖ್ಯಸ್ಥ ಆಸ್ರಾ ಗರ್ಗ್ ಅವರನ್ನು ಈ ಹಿಂದಿನ ತನಿಖೆಗಳಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ನೇಮಿಸಿದ್ದವು ಎನ್ನುವ ಅಂಶವನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯು ರಾಷ್ಟ್ರೀಯ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳುತ್ತಾ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ತಮಿಳುನಾಡು ಸರ್ಕಾರವು ತನ್ನ ತನಿಖೆಯಲ್ಲಿ ಯಾವುದೇ ಪಕ್ಷಪಾತ ಅಥವಾ ದುರುದ್ದೇಶಪೂರಿತ ಉದ್ದೇಶ ಕಂಡುಬಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದು, ಎಸ್‌ಐಟಿ ತನ್ನ ಕೆಲಸವನ್ನು ಮುಂದುವರಿಸಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟನ್ನು ಒತ್ತಾಯಿಸಿದೆ(ಏಜೆನ್ಸೀಸ್​).