School Mid Day Meal (ಚಿತ್ರ X) 
ದೇಶ

ಸರ್ಕಾರಿ ಶಾಲಾ ಬಿಸಿಯೂಟಕ್ಕೆ ಚಿಕನ್ ಬಿರಿಯಾನಿ ಭಾಗ್ಯ..? ತಮಿಳುನಾಡು ಶಿಕ್ಷಣ ಇಲಾಖೆಯಿಂದ ಸಿಎಂ ವಿಜಯ್​ಗೆ ಪ್ರಸ್ತಾವನೆ! School Mid Day Meal

ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿ ವಾರಕ್ಕೊಮ್ಮೆ 'ಚಿಕನ್ ಬಿರಿಯಾನಿ' (School Mid Day Meal) ನೀಡುವ ನೂತನ ಪ್ರಸ್ತಾವನೆಯೊಂದನ್ನು ರಾಜ್ಯ ಸರ್ಕಾರ ತೀವ್ರವಾಗಿ ಪರಿಶೀಲಿಸುತ್ತಿದೆ. ಶಾಲಾ ಶಿಕ್ಷಣ ಸಚಿವ ರಾಜಮೋಹನ್ ಅವರು ಈ ಹೊಸ ಯೋಜನೆಯ ಕಲ್ಪನೆಯನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಮುಂದೆ ಮಂಡಿಸಿದ್ದು, ಶಾಲಾ ಮಕ್ಕಳ ಪೋಷಕಾಂಶ ಮಟ್ಟ ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ರಾಜಮೋಹನ್, ಕಾಮರಾಜ್ ಅವರು ಬಿಸಿಊಟ ಯೋಜನೆಯನ್ನು ತಂದರೆ, ಎಂ. ಕರುಣಾನಿಧಿ ಅವರು ಮೊಟ್ಟೆಯನ್ನು ಸೇರಿಸಿದರು. ನಂತರ ಬಂದ ಎಂ.ಜಿ. ರಾಮಚಂದ್ರನ್ (MGR) ಇದನ್ನು ಪೌಷ್ಟಿಕ ಆಹಾರ ಯೋಜನೆಯನ್ನಾಗಿ ಪರಿವರ್ತಿಸಿದರೆ, ಜೆ. ಜಯಲಲಿತಾ ಅವರು ವಾರವಿಡೀ ಮೊಟ್ಟೆ ವಿತರಣೆಯನ್ನು ವಿಸ್ತರಿಸಿದರು. ಇದೇ ದಾರಿಯಲ್ಲಿ ಸಾಗಿ ವಾರಕ್ಕೊಮ್ಮೆ ಸರ್ಕಾರಿ ಶಾಲೆಗಳಲ್ಲಿ ಚಿಕನ್ ಬಿರಿಯಾನಿ ನೀಡುವ ಇಚ್ಛೆ ತಮ್ಮದಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಈ ಪ್ರಸ್ತಾವನೆಯು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಅಂತಿಮ ಅನುಮೋದನೆಗಾಗಿ ಕಾಯುತ್ತಿದ್ದು, ಸರ್ಕಾರದಿಂದ ಅಧಿಕೃತ ನಿರ್ಧಾರವಿನ್ನೂ ಹೊರಬಿದ್ದಿಲ್ಲ. ಶಾಲಾ ಮಕ್ಕಳ ಪೋಷಕಾಂಶ ಯೋಜನೆಯಲ್ಲಿ ತಮಿಳುನಾಡು ಮೊದಲಿನಿಂದಲೂ ಇಡೀ ದೇಶಕ್ಕೇ ಮಾದರಿಯಾದ ಹರಿಕಾರನಾಗಿ ಗುರುತಿಸಿಕೊಂಡಿದೆ.
1950ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ಕಾಮರಾಜ್ ಅವರು ಜಾರಿಗೆ ತಂದ ಈ ಯೋಜನೆ, ಭಾರತದ ಅತ್ಯಂತ ಯಶಸ್ವಿ ಹಾಗೂ ಕ್ರಾಂತಿಕಾರಿ ಸಾಮಾಜಿಕ ಕಲ್ಯಾಣ ಉಪಕ್ರಮಗಳಲ್ಲಿ ಒಂದಾಗಿ ಬೆಳೆದಿದೆ. ತದನಂತರ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳೂ ಶಾಲಾ ಆಹಾರದ ಪೌಷ್ಟಿಕ ಮೌಲ್ಯ ಮತ್ತು ದಿನನಿತ್ಯದ ಮೆನುವನ್ನು ಸುಧಾರಿಸುತ್ತಲೇ ಬಂದಿವೆ.
ಇದರ ಭಾಗವಾಗಿ ಸೆಪ್ಟೆಂಬರ್ 2022 ರಲ್ಲಿ ಅಂದಿನ ಡಿಎಂಕೆ ಸರ್ಕಾರವು 'ಮುಖ್ಯಮಂತ್ರಿಗಳ ಬೆಳಗಿನ ಉಪಹಾರ ಯೋಜನೆ'ಯನ್ನು ಪ್ರಾರಂಭಿಸಿತ್ತು. ನಂತರ ಇದನ್ನು 'ಪೆರುಂಥಲೈವರ್ ಕಾಮರಾಜರ್ ಉಪಹಾರ ಯೋಜನೆ' ಎಂದು ಮರುನಾಮಕರಣಗೊಳಿಸಿ, ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿ ಊಟದ ಜೊತೆಗೆ ಬೆಳಗಿನ ತಿಂಡಿಯೂ ಸಿಗುವಂತೆ ನೋಡಿಕೊಳ್ಳಲಾಯಿತು. ಇದರಿಂದ ಶಾಲಾ ಅವಧಿಯಲ್ಲಿ ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಶಕ್ತಿವರ್ಧಕ ಆಹಾರ ಲಭ್ಯವಾಗುವಂತಾಗಿದೆ.
ಒಂದು ವೇಳೆ ಸಚಿವ ರಾಜಮೋಹನ್ ಅವರ ಈ ಚಿಕನ್ ಬಿರಿಯಾನಿ ಪ್ರಸ್ತಾವನೆಗೆ ಸಿಎಂ ವಿಜಯ್ ಅಂಕಿತ ಬಿದ್ದರೆ, ಇದು ಶಾಲಾ ಊಟದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಬದಲಾವಣೆಯಾಗಲಿದೆ. ಈ ನೂತನ ಯೋಜನೆಯು ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸುವುದಲ್ಲದೆ, ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಲು ನೆರವಾಗಲಿದೆ.
ಇದೇ ವೇಳೆ, ಪ್ರಸ್ತುತ ನೀಡಲಾಗುತ್ತಿರುವ ಬೆಳಗಿನ ಉಪಹಾರದ ಮೆನುವನ್ನು ಸಂಪೂರ್ಣವಾಗಿ ಬದಲಾಯಿಸಲು ಸರ್ಕಾರ ನಿರ್ಧರಿಸಿದ್ದು, ಪ್ರತಿ ವಿದ್ಯಾರ್ಥಿಗೆ ನಿಗದಿಯಾಗಿರುವ 15 ವೆಚ್ಚದ ಮಿತಿಯಲ್ಲಿ ಮಕ್ಕಳಿಗೆ ಬೇಸರ ತರಿಸುವ ರವೆ ಹಾಗೂ ಗೋಧಿ ಉಪ್ಪಿಟ್ಟಿನ ಬದಲಿಗೆ ಹೆಚ್ಚು ರುಚಿಕರ ಮತ್ತು ಪೋಷಕಾಂಶಯುಕ್ತ ಪರ್ಯಾಯ ಆಹಾರಗಳನ್ನು ನೀಡಲು ಶಿಕ್ಷಣ ಇಲಾಖೆ ಕಾರ್ಯಯೋಜನೆ ರೂಪಿಸುತ್ತಿದೆ (ಏಜೆನ್ಸೀಸ್​).