ಚೆನ್ನೈ: 2026ರ ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ(Tamil Nadu elections) ಗುರುವಾರ(ಏ. 23) ಮುಕ್ತಾಯವಾಗಿದ್ದು, ಮೈಲಾಡುತುರೈ ಜಿಲ್ಲೆಯ ಪೂಂಪುಹಾರ್ ಕ್ಷೇತ್ರದ ಬೂತ್ವೊಂದರಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್‌ಗೆ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಪೊರಾಯರ್‌ನ ಜಮಾಲಿಯಾ ಅನುದಾನಿತ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 324 ರಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯನ್ನು ಕಟ್ಟುಚೇರಿಯ ನಿವೃತ್ತ ಸೇನಾ ಸಿಬ್ಬಂದಿ ಪ್ರಭಾಕರನ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುತಾಲಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಘ್ನೇಶ್ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ವಿಘ್ನೇಶ್ ಬೂತ್‌ನಲ್ಲಿ ಭದ್ರತಾ ಕರ್ತವ್ಯದಲ್ಲಿದ್ದಾಗ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ತಾನು ತಂದಿದ್ದ ಮಾರಕ ಆಯುಧದಿಂದ ಹಲ್ಲೆ ಮಾಡಿದ್ದು, ಕುತ್ತಿಗೆ ಮತ್ತು ಎರಡು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಪೊರಾಯರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿ ಪ್ರಭಾಕರ್ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಆರೋಪಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ. ಈ ಹಿಂದೆಯೂ ಇದೇ ರೀತಿಯ ಘಟನೆಯಲ್ಲಿ ಭಾಗಿಯಾಗಿದ ಬಗ್ಗೆ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ನಡೆದ ಒಂದೇ ಹಂತದ ಮತದಾನ ಪ್ರಕ್ರಿಯೆಯೂ ಸಂಜೆ 6 ಗಂಟೆಗೆ ಪೂರ್ಣಗೊಂಡಿದೆ. ಒಟ್ಟು 4,023 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಇದೇ ಮೊದಲ ಬಾರಿಗೆ ರಾಜ್ಯ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದ್ದು, ಸಂಜೆ 5 ಗಂಟೆಯವರೆಗೆ ಶೇ.82.24ರಷ್ಟು ಮತದಾನ ದಾಖಲಾಗಿದೆ (ಏಜೆನ್ಸೀಸ್).