ಕಾಂಗ್ರೆಸ್ ನಾಯಕರು ಸಿಎಂ ಎಂ.ಕೆ.ಸ್ಟಾಲಿನ್ ಭೇಟಿಯಾಗಿರುವುದು.
ಚೆನ್ನೈ: ಮುಂದಿನ ಎರಡು ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆಗೂ(TamilNadu elections) ಮುನ್ನ ಕಾಂಗ್ರೆಸ್-ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ನಡುವಿನ ಸೀಟು ಹಂಚಿಕೆ ಅನಿಶ್ಚಿತತೆಗೆ ಕೊನೆಗೂ ಅಂತ್ಯ ಹಾಡಿದ್ದು, ಇಂದು(ಮಾ. 04) ಎರಡೂ ಪಕ್ಷಗಳು ಸೀಟು ಹಂಚಿಕೆಯ ಒಪ್ಪಂದವನ್ನು ಅಂತಿಮಗೊಳಿಸಿವೆ.
ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮಿತ್ರ ಪಕ್ಷ ಕಾಂಗ್ರೆಸ್ಗೆ ವಿಧಾನಸಭಾ ಚುನಾವಣೆಗೆ 28 ಸ್ಥಾನಗಳು ಮತ್ತು ಒಂದು ರಾಜ್ಯಸಭಾ ಸ್ಥಾನವನ್ನು ಹಂಚಿಕೆ ಮಾಡುವ ಮೂಲಕ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.
ಇಂದು ಸಂಜೆ ಡಿಎಂಕೆ ಪ್ರಧಾನ ಕಚೇರಿಯಾದ ಅಣ್ಣಾ ಅರಿವಾಲಯದಲ್ಲಿ ಸಿಎಂ ಎಂ.ಕೆ.ಸ್ಟಾಲಿನ್ ಭೇಟಿಯಾಗಿ ಮಾತುಕತೆ ನಡೆಸಿದ ತಮಿಳುನಾಡು ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್, ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಸೇರಿದಂತೆ ಉನ್ನತ ನಾಯಕರು, ಸೀಟು ಹಂಚಿಕೆ ಒಪ್ಪಂದಕ್ಕೆ ಒಪ್ಪಿದ್ದಾರೆ.
ಸೀಟು ಹಂಚಿಕೆ ಮತ್ತು ಮೈತ್ರಿ ಮುರಿಯುವ ಊಹಾಪೋಹಗಳ ನಡುವೆ ನಿನ್ನೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಿಎಂ ಸ್ಟಾಲಿನ್ ಹೇಳಿದ ಸೂತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿದ್ದು, ದೀರ್ಘಕಾಲದ ಕಾಂಗ್ರೆಸ್-ಡಿಎಂಕೆ ಮೈತ್ರಿಯನ್ನು ಮುಂದುವರೆಸಲು ಹಸಿರು ನಿಶಾನೆ ತೋರಿಸಿದ್ದರು.
ಇತ್ತೀಚಿನ ತಿಂಗಳಲ್ಲಿ ಚುನಾವಣೆ ದಿನಗಳು ಹತ್ತಿರ ಬರುತ್ತಿದ್ದಂತೆ ತಮಿಳುನಾಡಿನ ಕೆಲವು ಕಾಂಗ್ರೆಸ್ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ 35ರಿಂದ 40 ಸ್ಥಾನಗಳನ್ನು ನೀಡುವುದರ ಜೊತೆಗೆ ಅಧಿಕಾರದಲ್ಲಿ ಪಾಲು ನೀಡಬೇಕು ಎಂಬ ಪ್ರಸ್ತಾಪವನ್ನು ಮಂಡಿಸಿದ್ದರು. ಆದರೆ ಡಿಎಂಕೆ ಮತ್ತು ಸಿಎಂ ಎಂ.ಕೆ.ಸ್ಟಾಲಿನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು 2019ರಿಂದ ಸತತ ಮೂರು ಚುನಾವಣೆಗಳಲ್ಲಿ ಗೆದ್ದಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಪುದುಚೇರಿ ಸೇರಿ ತಮಿಳುನಾಡಿನ ಎಲ್ಲಾ 40 ಸ್ಥಾನಗಳಲ್ಲಿ ಗೆದ್ದು ಬೀಗಿದ್ದವು. ಈ ಬಾರಿ ಸೀಟು ಹಂಚಿಕೆ ಒಪ್ಪಂದದ ವಿಳಂಬವೂ ಕಾಂಗ್ರೆಸ್-ಡಿಎಂಕೆಯ ಮೈತ್ರಿ ಮುರಿಯುವ ಊಹಾಪೋಹಗಳಿಗೆ ಕಾರಣವಾಗಿತ್ತು. ಕಾಂಗ್ರೆಸ್ ಇತ್ತೀಚಿಗೆ ಹೊಸ ಪಕ್ಷ ಕಟ್ಟಿ ಸಂಚಲನ ಸೃಷ್ಟಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಜೊತೆಗೆ ಮೈತ್ರಿಗೆ ಮುಂದಾಗಿದೆ ಎನ್ನಲಾಗಿತ್ತು (ಏಜೆನ್ಸೀಸ್).