ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮೊದಲೇ ಪಕ್ಷಗಳು ಡಿಎಂಕೆ ಮತ್ತು ಎಐಎಡಿಎಂಕೆ ಚುನಾವಣೆಗೆ ಭರದಿಂದ ಸಿದ್ದತೆ ನಡೆಸಿದ್ದು, ಇಂದು(ಜ. 17) ಎಐಎಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಐದು ಭರವಸೆಗಳನ್ನು ಘೋಷಣೆ ಮಾಡಿದ್ದಾರೆ.
ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರ 109ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ನಮನ ಸಲ್ಲಿಸಿ ಮಾತನಾಡಿರುವ ಅವರು, ಪಕ್ಷದ ಚುನಾವಣಾ ಪ್ರಣಾಳಿಕೆ ತಯಾರಿಕಾ ಸಮಿತಿ ಪ್ರಣಾಳಿಕೆ ತಯಾರಿಸುವ ಮೊದಲೇ ಐದು ಪ್ರಮುಖ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ.
ಪಡಿತರ ಕುಟುಂಬದ ಮುಖ್ಯಸ್ಥ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಭತ್ಯ, ಪುರುಷರಿಗೆ ಉಚಿತ ಬಸ್ ಪ್ರಯಾಣ, ಅಮ್ಮ ವಸತಿ ಯೋಜನೆ, 150 ದಿನ ಉದ್ಯೋಗ ಖಾತರಿ ಕೆಲಸ, ಅಮ್ಮ ದ್ವಿಚಕ್ರ ವಾಹನ ಯೋಜನೆ ನೀಡುವುದಾಗಿ ಎಡಪ್ಪಾಡಿ ಭರವಸೆ ನೀಡಿದ್ದಾರೆ.
ಎಡಪ್ಪಾಡಿ ಘೋಷಿಸಿದ ಐದು ಭರವಸೆಗಳೇನು?
- ಮಗಲಿರ್ ಕುಲವಿಳಕ್ಕು ತಿಟ್ಟಂ: ರಾಜ್ಯ ಎಲ್ಲಾ ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಓರ್ವ ಮಹಿಳೆಗೆ ತಿಂಗಳಿಗೆ 2 ಸಾವಿರ ರೂ. ಭತ್ಯ. ಅದನ್ನು ಅವರ ಕುಟುಂಬದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
- ಅಮ್ಮ ವಸತಿ ಯೋಜನೆ: ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರವು ನಿವೇಶನ ನೀಡಿ ಕಾಂಕ್ರೀಟ್ ಮನೆಗಳನ್ನು ಒದಗಿಸುತ್ತದೆ. ನಗರ ಪ್ರದೇಶಗಳಲ್ಲಿ ಭೂಮಿಯನ್ನು ಖರೀದಿಸಿ ಬಹುಮಹಡಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಅಗತ್ಯವಿರುವವರಿಗೆ ಮನೆ ನೀಡುತ್ತದೆ. ಅದೇ ರೀತಿ, ಪರಿಶಿಷ್ಟ ಸಮುದಾಯಗಳಿಗೆ ಸೇರಿದ ಕುಟುಂಬಗಳಲ್ಲಿ ಒಟ್ಟಿಗೆ ವಾಸಿಸುವಾಗ, ಬೇರೆಯಾಗಿ ಪ್ರತ್ಯೇಕ ವಾಸಿಸುತ್ತಿದ್ದರೆ ಅವರಿಗೂ ಮನೆಗಳನ್ನು ಒದಗಿಸಲಾಗುವುದು.
- ಪುರುಷರಿಗೂ ಉಚಿತ ಬಸ್ ಪ್ರಯಾಣ: ರಾಜ್ಯದಲ್ಲಿ ಈಗಾಗಲೇ ಉದ್ಯೋಗಸ್ಥ ಮಹಿಳೆಯರಿಗೆ ಇರುವಂತೆ ಪುರುಷರಿಗೂ ನಗರಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದು.
- ಉದ್ಯೋಗ ಖಾತರಿ ದಿನ 100ರಿಂದ 150ಕ್ಕೆ ಏರಿಕೆ: ಕೇಂದ್ರ ವಿಬಿ ಜಿ ರಾಮ್ ಜಿ ಯೋಜನೆಯ ಗ್ರಾಮೀಣ ಉದ್ಯೋಗ ಖಾತರಿ ಕೆಲಸದ ದಿನಗಳನ್ನು ಕೇಂದ್ರ ಈಗಾಗಲೇ 125 ದಿನಕ್ಕೆ ಏರಿಸಿದ್ದು, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 150 ದಿನಗಳಿಗೆ ಕೆಲಸ ನೀಡುವ ಭರವಸೆ.
- ಅಮ್ಮ ದ್ವಿಚಕ್ರ ವಾಹನ: ಈ ಯೋಜನೆಯಲ್ಲಿ ರಾಜ್ಯದ 5 ಲಕ್ಷ ಮಹಿಳೆಯರಿಗೆ ತಲಾ 25 ಸಾವಿರ ಸಬ್ಸಿಡಿಯೊಂದಿಗೆ ದ್ವಿಚಕ್ರಗಳನ್ನು ಒದಗಿಸುವುದು.
ಈ ಎಲ್ಲಾ ಯೋಜನೆಗಳಿಂದ ರಾಜ್ಯದ ಮೇಲಿನ ಸಾಲ ಮತ್ತಷ್ಟು ಹೆಚ್ಚಳವಾಗುತ್ತಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಆಡಳಿತಾತ್ಮಕ ಸಾಮರ್ಥ್ಯವಿದ್ದರೆ ಎಲ್ಲವನ್ನೂ ಮಾಡಬಹುದು ಎಂದು ಎಡಪ್ಪಾಡಿ ಪಳನಿಸ್ವಾಮಿ ಉತ್ತರಿಸಿದ್ದಾರೆ (ಏಜೆನ್ಸೀಸ್).