- ಇಂದು ನಡೆದ ತಮಿಳುನಾಡು ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯ
- ತಮಿಳುನಾಡು ಜನತೆಯ ಒಲವು ಯಾರಿಗೆ?
- ಮತದಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ವೋಟಿಂಗ್
- ಎಕ್ಟಿಟ್ ಪೋಲ್ ಸಮೀಕ್ಷೆಗಳ ಮೇಲೆ ಎಲ್ಲರ ಕಣ್ಣು
Tamil Nadu Elections 2026: ಇಂದು (ಏ.23) ಪಂಚರಾಜ್ಯ ಚುನಾವಣೆಯಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮತದಾನ ನಡೆಯಿತು. ಇದರಲ್ಲಿ ಬಂಗಾಳದ ಮೊದಲ ಹಂತದ ವೋಟಿಂಗ್ ಮಾತ್ರ ಇಂದಿಗೆ ಅಂತ್ಯವಾಗಿದೆ. ಡಿಎಂಕೆ, ಎಐಎಡಿಎಂಕೆ ಮತ್ತು ಟಿವಿಕೆ ನಡುವಿನ ಬಿರುಸಿನ ಪೈಪೋಟಿಯಲ್ಲಿ ಯಾವ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಎಂಬ ಕುತೂಹಲದ ಪ್ರಶ್ನೆ ಇದೀಗ ತಮಿಳು ಜನರಲ್ಲಿ ಕಾಡತೊಡಗಿದೆ.
ದಾಖಲೆಯ ಮತದಾನ
ರಾಜ್ಯದಲ್ಲಿ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿದ್ದು, ಬೆಳಗ್ಗೆ 7 ಗಂಟೆಯಿಂದ ನಡೆದ ಒಂದೇ ಹಂತದ ಮತದಾನ ಪ್ರಕ್ರಿಯೆಯೂ ಸಂಜೆ 6 ಗಂಟೆಗೆ ಪೂರ್ಣಗೊಂಡಿದೆ. ತಮಿಳುನಾಡಿನಲ್ಲಿ, ಡಿಎಂಕೆ, ಎಐಎಡಿಎಂಕೆ ಮತ್ತು ಟಿವಿಕೆ ಮಧ್ಯೆ ಭಾರೀ ಪೈಪೋಟಿ ಕಂಡುಬಂದಿದೆ. ಈ ಚುನಾವಣೆಯಲ್ಲಿ ಒಟ್ಟು 4,023 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾನದ ವೇಳೆ ಅಲ್ಲಿ-ಇಲ್ಲಿ ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ, ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ತಮಿಳುನಾಡಿನ ಮತದಾನದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದ್ದು, ಸಂಜೆ 5 ಗಂಟೆಯವರೆಗೆ ಶೇ.82.24ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಒಟ್ಟು 4,71,60,321 ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು 2011ರ ಚುನಾವಣೆಯಲ್ಲಿ. ಆಗ ಶೇ.78ರಷ್ಟು ವೋಟಿಂಗ್ ಆಗಿತ್ತು. ಅದೇ 2021ರಲ್ಲಿ ಶೇ. 73.63ರಷ್ಟು ಮತದಾನ ದಾಖಲಾಗಿತ್ತು. ಆದರೆ, ಈ ಬಾರಿ ಮತದಾರರು ಊಹೆಗೂ ಮೀರಿದ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ, ಹಿಂದಿನ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು?
ಸಿಎಂ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ ಶೇ.83.58 ರಷ್ಟು, ಮಾಜಿ ಸಿಎಂ ಪಳನಿಸ್ವಾಮಿ ಅವರ ಎಡಪ್ಪಾಡಿ ಕ್ಷೇತ್ರದಲ್ಲಿ ಶೇ. 89.09ರಷ್ಟು, ವಿಜಯ್ ಅವರ ಪೆರಂಬೂರು ಕ್ಷೇತ್ರದಲ್ಲಿ ಶೇ.86.72 ರಷ್ಟು ಮತ್ತು ತಿರುಚಿರಾಪಳ್ಳಿ ಪೂರ್ವದಲ್ಲಿ ಶೇ.79.32ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.
ಈ ಹಿಂದಿನಿಂದಲೂ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಸ್ಪರ್ಧೆ ಎಂದರೆ ಅದು ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ. ಆದರೀಗ, ಟಿವಿಕೆ ಪಕ್ಷವನ್ನು ಕಟ್ಟಿರುವ ಚಿತ್ರನಟ ವಿಜಯ್ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಪರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಜೊತೆಗೆ ತಾವು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿರುವುದು ಗಮನಾರ್ಹ. ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಈ ಬಾರಿಯ ಚುನಾವಣೆಯಲ್ಲಿ ಜನರಿಂದ ಅಭೂತಪೂರ್ವ ಬೆಂಬಲ ಪಡೆದು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲ ಸದ್ಯ ತಮಿಳುನಾಡಿನ ಜನತೆಯಲ್ಲಿ ಮೂಡಿದೆ.
ಇದು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಕುತೂಹಲದ ವಿಷಯವಾಗಿದೆ. ಎಲ್ಲರ ಕಣ್ಣುಗಳು ಎಕ್ಸಿಟ್ ಪೋಲ್ಗಳ ಸಮೀಕ್ಷೆಗಳತ್ತ ತಿರುಗಿವೆ. ಆದಾಗ್ಯೂ, ತಮಿಳುನಾಡು ವಿಧಾನಸಭಾ ಎಲೆಕ್ಷನ್ನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಇದೇ ಏಪ್ರಿಲ್ 29ರಂದು ಸಂಜೆ 6.30ಕ್ಕೆ ಹೊರಬೀಳಲಿವೆ. ಮತಗಳ ಎಣಿಕೆ ಮೇ.4ರಂದು ನಡೆಯಲಿದ್ದು, ಯಾರಿಗೆ ತಮಿಳುನಾಡಿನ ಅಧಿಕಾರದ ಚುಕ್ಕಾಣಿ ಎಂಬುದು ಸ್ಪಷ್ಟವಾಗಿ ಗೋಚರಿಸಲಿದೆ.
ಚುನಾವಣಾ ಆಯೋಗ ಎಚ್ಚರಿಕೆ!
ಭಾರತೀಯ ಚುನಾವಣಾ ಆಯೋಗದ (ECI) ನಿಯಮಗಳ ಪ್ರಕಾರ, ಏಪ್ರಿಲ್ 9ರಿಂದ ಏಪ್ರಿಲ್ 29ರವರೆಗೆ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬರುವಂತಿಲ್ಲ. ಕಾರಣ, ತಮಿಳುನಾಡಿನ ಜೊತೆಗೆ, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿಯೂ ಚುನಾವಣೆಗಳು ನಡೆದಿವೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊನೆಯ ಹಂತದ ಚುನಾವಣೆ ಇನ್ನೂ ಬಾಕಿ ಉಳಿದಿದ್ದು, ಹೀಗಾಗಿ ಪೋಲ್ಗಳಿಗೆ ಅವಕಾಶಗಳಿಲ್ಲ.
ಬಂಗಾಳದಲ್ಲಿ ಎರಡನೇ ಹಂತದ ಮತದಾನ ಈ ತಿಂಗಳ 29ರಂದು ನಡೆಯಲಿದೆ. ಇದರೊಂದಿಗೆ, ಐದು ರಾಜ್ಯಗಳ ಮತದಾನ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ. ಅಲ್ಲಿಗೆ, ಒಟ್ಟಾರೆ ತಮಿಳುನಾಡು ಸೇರಿ ಐದು ರಾಜ್ಯಗಳ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಏ.29ರ ಸಂಜೆ 6.30ಕ್ಕೆ ಪ್ರಕಟವಾಗಲಿದೆ,(ಏಜೆನ್ಸೀಸ್).