ದಳಪತಿ ವಿಜಯ್​  
ದೇಶ

ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ! 'ಜನ ನಾಯಗನ್'​ ಎಷ್ಟು ಆಸ್ತಿಗೆ 'ದಳಪತಿ'? ಇಲ್ಲಿದೆ ನೋಡಿ ವಿವರ

ಪ್ರಮುಖ ಮುಖ್ಯಾಂಶಗಳು

  • ಪೆರಂಬೂರು ಕ್ಷೇತ್ರದಿಂದ ನಾಪತ್ರ ಸಲ್ಲಿಸಿದ ದಳಪತಿ ವಿಜಯ್​
  • ನಾಮಪತ್ರದ ಸಲ್ಲಿಕೆ ವೇಳೆ ವಿಜಯ್ ಒಟ್ಟು ಆಸ್ತಿ ಮೌಲ್ಯ ರಿವೀಲ್
  • ನಟನ ಬಳಿಯಿದೆ ಹಲವಾರು ಐಷಾರಾಮಿ ಕಾರು, ದ್ವಿಚಕ್ರ ವಾಹನ
ಚೆನ್ನೈ: ಪ್ರಸ್ತುತ, ತಮಿಳುನಾಡಿನಲ್ಲಿ ಚುನಾವಣಾ ರಾಜಕೀಯ ಭರಾಟೆ ಬಿರುಸಿನಿಂದ ಸಾಗುತ್ತಿದ್ದು, ಇಂದು ಟಿವಿಕೆ ಮುಖ್ಯಸ್ಥ, ನಟ ವಿಜಯ್ 2026ರ ಚುನಾವಣೆಗೆ ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಮೊನ್ನೆಯಷ್ಟೇ ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದ ವಿಜಯ್​, ಒಟ್ಟು 234 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ವಿಶೇಷ ಎಂದರೆ, ಈ ಚುನಾವಣೆಯಲ್ಲಿ 'ಜನ ನಾಯಗನ್​' ಎರಡು ಕಡೆಯಿಂದ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನ ಪೆರಂಬೂರು (ಚೆನ್ನೈ) ಮತ್ತು ತಿರುಚಿ (ಪೂರ್ವ) ಕ್ಷೇತ್ರಗಳಿಂದ ಚುನಾವಣಾ ಕಣಕ್ಕಿಳಿಯಲಿರುವ ವಿಜಯ್​, ಇಂದು ಪೆರಂಬೂರು ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಒಟ್ಟು ಆಸ್ತಿ ಮೌಲ್ಯವನ್ನು ಬಹಿರಂಗಪಡಿಸಲಾಯಿತು. 'ಜನ ನಾಯಗನ್' ಆಸ್ತಿಯ ಸಂಖ್ಯೆ ಕೇಳಿ​ ಅಭಿಮಾನಿಗಳು ಮತ್ತು ನೆಟ್ಟಿಗರು ಹುಬ್ಬೇರಿಸಿದ್ದಾರೆ.
ವಿಜಯ್ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರ ಒಟ್ಟು ಆಸ್ತಿ 4,04,58,57,196 ರೂ. ಇದರಲ್ಲಿ ಬ್ಯಾಂಕ್ ಠೇವಣಿ, ಹೂಡಿಕೆ, ವಾಹನಗಳು ಮತ್ತು ಇತರ ಆಸ್ತಿಗಳ ಸಂಪೂರ್ಣ ವಿವರಗಳು ಸೇರಿವೆ. ವಿಜಯ್ ಬಳಿ ಬಿಎಂಡಬ್ಲ್ಯೂ 530, ಬಿಎಂಡಬ್ಲ್ಯೂ i7, ಟೊಯೋಟಾ ಲೆಕ್ಸಸ್ 350, ಟೊಯೋಟಾ ವೆಲ್‌ಫೈರ್ ಸೇರಿ ಇತರೆ ದುಬಾರಿ ಮೌಲ್ಯದ ಕಾರುಗಳು ಮತ್ತು ಬೈಕ್‌ಗಳಿವೆ.

ಹಿಂದಿನ ಹಣಕಾಸು ವರ್ಷಗಳ ಆದಾಯವೂ ರಿವೀಲ್​

2024–25ರಲ್ಲಿ 184.53 ಕೋಟಿ ರೂ.
2023-24ರಲ್ಲಿ 105.69 ಕೋಟಿ ರೂ.
2022-23ರಲ್ಲಿ 198.71 ಕೋಟಿ ರೂ.
2021–22ರಲ್ಲಿ 237.46 ಕೋಟಿ ರೂ.
2020-21ರಲ್ಲಿ 8.04 ಕೋಟಿ ರೂ. ಆದಾಯ ಎಂದು ವರದಿಯಾಗಿದೆ.
ಇದರ ಜೊತೆಗೆ, 2020-21ರ ಹಣಕಾಸು ವರ್ಷಕ್ಕೆ 6,13,520 ರೂ. ಆದಾಯ ಪಡೆದಿರುವುದಾಗಿ ವಿಜಯ್ ಅವರ ಪತ್ನಿ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಏಪ್ರಿಲ್ 23ರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಅವಕಾಶ ನೀಡಿ ಪಕ್ಷದ ಚಿಹ್ನೆ 'ವಿಜಿಲ್'ಗೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ನಮ್ಮನ್ನು ಅಧಿಕಾರಕ್ಕೆ ತನ್ನಿ ಎಂದು ವಿಜಯ್​ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ,(ಏಜೆನ್ಸೀಸ್).