ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ಕೆ.ಸಿ.ವೇಣುಗೋಪಾಲ್
ಚೆನ್ನೈ: ಕೆಲವೇ ತಿಂಗಳಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಆಡಳಿತರೂಢ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಅನಿಶ್ಚಿತತೆ ನಡುವೆ ಭಾನುವಾರ(ಫೆ. 22) ರಾತ್ರಿ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಸಿಎಂ ಎಂ.ಕೆ.ಸ್ಟಾಲಿನ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಿಎಂ ಎಂ.ಕೆ.ಸ್ಟಾಲಿನ್ ನಿವಾಸದಲ್ಲಿ ಸುಮಾರು 45 ನಿಮಿಷಗಳ ಕಾಲ ಕೆ.ಸಿ.ವೇಣುಗೋಪಾಲ್ ಚರ್ಚೆ ನಡೆಸಿದ್ದು, ಈ ವೇಳೆ ಸಂಸದೆ ಕನಿಮೋಳಿ ಕರುಣಾನಿಧಿ, ಕಾಂಗ್ರೆಸ್ನ ತಮಿಳುನಾಡು ಪಕ್ಷದ ಅಭ್ಯರ್ಥಿ ಪರಿಶೀಲನಾ ಸಮಿತಿಯ ಮುಖ್ಯಸ್ಥ ಮಾಜಿ ಉಪಮುಖ್ಯಮಂತ್ರಿ ಟಿ.ಎಸ್. ಸಿಂಗ್ ದೇವ್ ಉಪಸ್ಥಿತರಿದ್ದರು ಎನ್ನಲಾಗಿದೆ.
ಮಾತುಕತೆಯಲ್ಲಿ ಕೆ.ಸಿ.ವೇಣುಗೋಪಾಲ್, 2021ರ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಸ್ಥಾನಗಳಿಗಿಂತ ಹೆಚ್ಚಿನ ಸಂಖ್ಯೆಗೆ ಸಿಎಂ ಎಂ.ಕೆ.ಸ್ಟಾಲಿನ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಡಿಎಂಕೆ ಸ್ಥಾನಗಳನ್ನು ಅಂತಿಮಗೊಳಿಸಿಲ್ಲವಾದರೂ ಹೊಸ ಮಿತ್ರ ಪಕ್ಷಗಳಿಗೆ ಅವಕಾಶ ನೀಡುವ ಉದ್ದೇಶವಿರುವುದರಿಂದ ಹೆಚ್ಚಿನ ಸಂಖ್ಯೆಯ ಬೇಡಿಕೆಗೆ ಮನ್ನಣೆ ನೀಡಲಾಗುವುದಿಲ್ಲ ಎಂದು ಸಿಎಂ ಸ್ಟಾಲಿನ್ ತಿಳಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ಗೆ ನೀಡುವ ಸ್ಥಾನಗಳ ಹಂಚಿಕೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ, ಇದ್ದರೂ ಅದು ಒಂದು ಅಥವಾ ಎರಡೂ ಸ್ಥಾನಗಳಿಗೆ ಮಾತ್ರ ಎನ್ನಲಾಗಿದದೆ. ಭಾನುವಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜೊತೆ ಸೀಟು ಹಂಚಿಕೆ ಸಂಬಂಧ ಮಾತುಕತೆ ನಡೆಸಿರುವ ಡಿಎಂಕೆ ನಾಯಕರು, ಇಂದು ಎಂಎಂಕೆಗೆ ಆಹ್ವಾನ ನೀಡಿದ್ದಾರೆ. ಫೆ. 26 & 27ರಂದು ಸಿಪಿಎಂ ಮತ್ತು ಸಿಪಿಐ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಇನ್ನೂ ಡಿಎಂಕೆ ನಾಯಕರ ಪ್ರಕಾರ, 2021ರ ಮೈತ್ರಿಕೂಟಕ್ಕಿಂತ ಈ ಬಾರಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀತಿ ಮೈಯಂ ಮತ್ತು ದಿವಂಗತ ನಟ-ರಾಜಕಾರಣಿ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷವು ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿವೆ. ಈ ಪಕ್ಷಗಳಿಗೂ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
2021ರ ಚುನಾವಣೆಯ ನಂತರ ರಾಜಕೀಯವಾಗಿ ಮತ್ತು ಚುನಾವಣಾ ದೃಷ್ಟಿಯಿಂದ ತಮಿಳುನಾಡಿನ ಪ್ರಮುಖ ದಲಿತ ನಾಯಕ ಮತ್ತು ಸಂಸದ ವಿ.ತೋಲ್ತಿರುಮಾವಲವನ್ ಅವರ ವಿಸಿಕೆ(ವಿಡುತಲೈ ಚಿರುತೆಗಳ್ ಕಚ್ಚಿ) ಪಕ್ಷ ಹೊರತುಪಡಿಸಿ ಮತ್ಯಾವ ಪಕ್ಷಗಳಿಗೂ ಹೆಚ್ಚಿನ ಸ್ಥಾನ ನೀಡದೇ ಒಂದೇ ಸಂಖ್ಯೆಯ ಸ್ಥಾನಗಳನ್ನು ಹಂಚಿಕೆ ಮಾಡಲು ಡಿಎಂಕೆ ನಿರ್ಧರಿಸಿದೆ ಎನ್ನಲಾಗಿದೆ (ಏಜೆನ್ಸೀಸ್).