CM Vijay (ಚಿತ್ರ X) 
ದೇಶ

ರಾಜ್ಯ ಸಾಲದಲ್ಲಿದೆ, ಉಚಿತ ಕಾರು ಬೇಡ! ಸಿಎಂ ವಿಜಯ್ ನಿರ್ಧಾರಕ್ಕೆ ಕೌಂಟರ್ ಕೊಟ್ಟ ಪ್ರತಿಪಕ್ಷ ಡಿಎಂಕೆ! CM Vijay

ಚೆನ್ನೈ: ತಮಿಳುನಾಡಿನ ಎಲ್ಲಾ 234 ಶಾಸಕರಿಗೆ (MLA) ಉಚಿತ ಸರ್ಕಾರಿ ಕಾರುಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಘೋಷಿಸಿದ್ದು, ಇದು ಪ್ರತಿಪಕ್ಷ ಡಿಎಂಕೆ ಹಾಗೂ ಆಡಳಿತ ಪಕ್ಷದ ನಡುವೆ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ರಾಜ್ಯದ ಸಾಲದ ಹೊರೆಯನ್ನು ಉಲ್ಲೇಖಿಸಿ, ಡಿಎಂಕೆ ಈ ಉಚಿತ ಕೊಡುಗೆಯನ್ನು ಅಧಿಕೃತವಾಗಿ ತಿರಸ್ಕರಿಸಿದೆ. 

ರಾಜ್ಯ ಸಾಲದಲ್ಲಿದೆ, ಉಚಿತ ಕಾರು ಬೇಡ: ಉದಯನಿಧಿ ಸ್ಟಾಲಿನ್

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ತಮ್ಮ ಪಕ್ಷದ ಎಲ್ಲಾ 59 ಶಾಸಕರು ಸರ್ಕಾರ ನೀಡುವ ಉಚಿತ ಕಾರುಗಳನ್ನು ಪಡೆದುಕೊಳ್ಳದಿರಲು ನಿರ್ಧರಿಸಿದ್ದಾರೆ. ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ರಾಜ್ಯವು ಸಾಲದಲ್ಲಿದೆ ಎಂದರು. 
ಆದಾಗ್ಯೂ, ಉಚಿತ ಕೊಡುಗೆಗಳನ್ನು ವಿರೋಧಿಸುವುದಾಗಿ ಹೇಳಿದ್ದ ಆಡಳಿತ ಪಕ್ಷ, ಇದೀಗ ಶಾಸಕರಿಗೆ ಕಾರು ನೀಡಲು ಹೊರಟಿರುವುದು ಸರಿಯಲ್ಲ. ಹೀಗಾಗಿ ಸರ್ಕಾರದ ಮೇಲಿನ ಆರ್ಥಿಕ ಹೊರೆ ತಗ್ಗಿಸಲು  ನಾವು ಈ ಆಫರ್ ಬೇಡವೆಂದಿದ್ದೇವೆ" ಎಂದು ಡಿಎಂಕೆ ಸ್ಪಷ್ಟಪಡಿಸಿದೆ. 
ಅಷ್ಟೇ ಅಲ್ಲದೆ, ಶಾಸಕರ ಚುನಾವಣಾ ಅಫಿಡವಿಟ್ ಪರಿಶೀಲಿಸಿ, ಅವರ ಬಳಿ ಈಗಾಗಲೇ ಕಾರು ಇದೆಯೇ ಮತ್ತು ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿ ಅಗತ್ಯವಿದ್ದವರಿಗೆ ಮಾತ್ರ ಕಾರು ನೀಡಲಿ ಎಂದು ಉದಯನಿಧಿ ಸಲಹೆ ನೀಡಿದರು.

ಸರ್ಕಾರದ ತಿರುಗೇಟು ಮತ್ತು ಸಚಿವರ ಸಮರ್ಥನೆ

ಡಿಎಂಕೆಯ ಈ ನಿರ್ಧಾರಕ್ಕೆ ತಿರುಗೇಟು ನೀಡಿದ ಸಚಿವ ಆಧವ್ ಅರ್ಜುನ್, ಮುಖ್ಯಮಂತ್ರಿಯವರು ಎಲ್ಲಾ ಶಾಸಕರನ್ನು ಸಮಾನವಾಗಿ ಕಾಣುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು. ವಿಪಿಸಿ, ಕಮ್ಯುನಿಸ್ಟ್‌ನಂತಹ ಸಣ್ಣ ಪಕ್ಷಗಳ ಹಲವು ಶಾಸಕರ ಆರ್ಥಿಕ ಪರಿಸ್ಥಿತಿ ಕಳಪೆಯಾಗಿದ್ದು, ಕ್ಷೇತ್ರ ಸಂಚಾರಕ್ಕೆ ಕಾರು ಅವರಿಗೆ ಅಗತ್ಯ ಮೂಲಭೂತ ಸೌಕರ್ಯವಾಗಿದೆ ಹೊರತು ವಿಲಾಸಿ ವಸ್ತುವಲ್ಲ ಎಂದು ವಿವರಿಸಿದ್ದಾರೆ.
ಇದೇ ವೇಳೆ ಉದಯನಿಧಿ ಸ್ಟಾಲಿನ್ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಸಚಿವರು, ಮೂರು ಬಂಗಲೆಗಳನ್ನು ಹೊಂದಿರುವ ನಾಯಕರಿಗೆ ಸರ್ಕಾರಿ ವಸತಿಗೃಹ ಯಾಕೆ ಬೇಕು? ಕಾರು ಬೇಡ ಎನ್ನುವವರು ಸರ್ಕಾರಿ ಕ್ವಾರ್ಟರ್ಸ್ ಏಕೆ ಬಳಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಜೋಸೆಫ್ ವಿಜಯ್ ಸಮರ್ಥನೆ

ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಜೋಸೆಫ್ ವಿಜಯ್, ಶಾಸಕರು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ನಿರಂತರವಾಗಿ ಪ್ರಯಾಣಿಸಬೇಕಾಗುತ್ತದೆ.  ಸರ್ಕಾರಿ ವಾಹನ ಒದಗಿಸುವುದರಿಂದ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ನೂತನವಾಗಿ ಆಯ್ಕೆಯಾದ ಹಲವು ಶಾಸಕರು ಬಡತನದ ಹಿನ್ನೆಲೆಯಿಂದ ಬದ್ದಿದ್ದರಿಂದ ಅವರಿಗೆ ಈ ವಾಹನ ಅತ್ಯಗತ್ಯವಾಗಿದೆ ಎಂದರು. ವಾಹನಗಳ ಜೊತೆಗೆ ಚಾಲಕ, ಇಂಧನ ಮತ್ತು ನಿರ್ವಹಣೆಗಾಗಿ ಪ್ರತಿ ತಿಂಗಳು 75,000 ರೂ. ಭತ್ಯೆ ನೀಡುವುದಾಗಿ ಸರ್ಕಾರ ತಿಳಿಸಿದೆ (ಏಜೆನ್ಸೀಸ್​).