Tamil Nadu Election | ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamil Nadu Election) ಕೆಲವೇ ದಿನಗಳು ಬಾಕಿ ಉಳಿದಿದ್ದು, ವಿಪಕ್ಷವಾದ ಎಐಎಡಿಎಂಕೆ ಬುಧವಾರ ತನ್ನ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಪ್ರತಿಪಕ್ಷ ನಾಯಕ ಎ. ಕೆ. ಪಳನಿಸ್ವಾಮಿ ತಮ್ಮ ತವರು ಕ್ಷೇತ್ರವಾದ ಸೇಲಂ ಜಿಲ್ಲೆಯ ಎಡಪ್ಪಾಡಿಯಿಂದಲೇ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ.
ಪಕ್ಷದ ಆಡಳಿತ ಮಂಡಳಿಯು ಸುದೀರ್ಘ ಚರ್ಚೆಯ ಬಳಿಕ ಹಿರಿಯ ನಾಯಕರಿಗೆ ಆದ್ಯತೆ ನೀಡಿ ಈ ಪಟ್ಟಿಯನ್ನು ಸಿದ್ಧಪಡಿಸಿದ್ದು, ಪ್ರಮುಖ ಅಭ್ಯರ್ಥಿಗಳ ಪೈಕಿ ವೆಪ್ಪನಹಳ್ಳಿಯಿಂದ ಕೆ.ಪಿ. ಮುನುಸಾಮಿ, ದಿಂಡಿಗಲ್‌ನಿಂದ ಸಿ. ಶ್ರೀನಿವಾಸನ್, ನಾಥಂನಿಂದ ಆರ್. ವಿಶ್ವನಾಥನ್, ಥೋಂಡಮುತ್ತೂರಿನಿಂದ ಎಸ್.ಪಿ. ವೇಲುಮಣಿ ಮತ್ತು ರಾಯಪುರಂನಿಂದ ಡಿ. ಜಯಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಇವರಷ್ಟೆ ಅಲ್ಲದೇ ಕೃಷ್ಣಗಿರಿಯಿಂದ ಪಿ. ಬಾಲಕೃಷ್ಣ, ರಾಯಕೊಟ್ಟೈನಿಂದ ಡಿ. ಜಯಕುಮಾರ್, ಹೊಸೂರಿನಿಂದ ಸಿ.ವಿ. ಷಣ್ಮುಗಂ, ಮಧುರಾಂತಕಂನಿಂದ ಎಸ್.ಕೆ. ರಾಜೇಂದ್ರನ್, ಪಾಲಕೋಡ್ನಿಂದ ಕೆ.ಪಿ. ಅನ್ಬಳಗನ್, ಪೆನ್ನಗಾರಂನಿಂದ ಆರ್.ಕೆ. ನಾಗರಾಜ್ ಮತ್ತು ವೇಲೂರಿನಿಂದ ಓ.ಎಸ್. ಮಣಿಯನ್ ಸೇರಿದಂತೆ ಹಲವು ಮಾಜಿ ಸಚಿವರು ಹಾಗೂ ಹಿರಿಯ ಮುಖಂಡರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅಭ್ಯರ್ಥಿಗಳನ್ನು ಘೋಷಿಸಿದ ಮೊದಲ ಪ್ರಮುಖ ಪಕ್ಷ
ತಮಿಳು ರಾಷ್ಟ್ರೀಯತಾವಾದಿ ಸಂಘಟನೆಯಾದ ಎನ್‌ಟಿಕೆ (NTK) ಈಗಾಗಲೇ ಎಲ್ಲಾ 234 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ ಸಹ, ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸಿದ ರಾಜ್ಯದ ಮೊದಲ ಪ್ರಮುಖ ರಾಜಕೀಯ ಪಕ್ಷ ಎಐಎಡಿಎಂಕೆ. ಸದ್ಯಕ್ಕೆ ಪಕ್ಷವು ಕೆಲವೇ ಅಭ್ಯರ್ಥಿಗಳ ಹೆಸರನ್ನು ಮಾತ್ರ ಬಿಡುಗಡೆ ಮಾಡಿದ್ದರೂ ಸಹ, ಚುನಾವಣಾ ತಯಾರಿ ವಿಷಯದಲ್ಲಿ ಎದುರಾಳಿಗಳಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ ಎನ್ನುವುದನ್ನು ಸಾಬೀತುಪಡಿಸಿದೆ.
ಈ ಮಹತ್ವದ ಬೆಳವಣಿಗೆಗು ಮೊದಲು, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ನಡುವೆ ಸುದೀರ್ಘ ಸಭೆ ನಡೆದಿದ್ದು, ಇದಾದ ಬಳಿಕವೇ ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿನ ಸೀಟು ಹಂಚಿಕೆಯ ಕುರಿತು ಸ್ಪಷ್ಟ ಚಿತ್ರಣ ಲಭಿಸಿದೆ. ತಮಿಳು ಮಾಣಿಲ ಕಾಂಗ್ರೆಸ್ (ಮೂಪನಾರ್) ಅಧ್ಯಕ್ಷ ಜಿ.ಕೆ. ವಾಸನ್ ಅವರು ಮಂಗಳವಾರ ಅಧಿಕೃತ ಹೇಳಿಕೆ ನೀಡಿದ್ದು, ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದೊಂದಿಗೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದೆ ಎಂದು ತಿಳಿಸಿದ್ದು, ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ರಾಜ್ಯ ವಿಧಾನಸಭೆಯ ಅವಧಿ ಮೇ 10ಕ್ಕೆ ಕೊನೆಗೊಳ್ಳಲಿದ್ದು, ಅಧಿಕಾರ ಹಿಡಿಯಲು ಈಗಿನಿಂದಲೇ ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ(ಏಜೆನ್ಸೀಸ್).