ಆರೋಗ್ಯ ಸಚಿವ ಕೆ.ಜಿ. ಅರುಣ್‌ರಾಜ್ 
ದೇಶ

ನೀಟ್ ಪರೀಕ್ಷಾ ವ್ಯವಸ್ಥೆ ರದ್ದುಗೊಳಿಸುವಂತೆ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಸಭಾತ್ಯಾಗ ಮಾಡಿದ ಬಿಜೆಪಿ | NEET

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ಸರ್ವಾನುಮತದಿಂದ ನೀಟ್ ಪರೀಕ್ಷಾ ವ್ಯವಸ್ಥೆಯನ್ನು(NEET) ರದ್ದುಗೊಳಿಸುವಂತೆ ಕೋರಿ ಮಂಗಳವಾರ(ಆ. 11) ನಿರ್ಣಯ ಅಂಗೀಕರಿಸಲಾಗಿದ್ದು, ಇದನ್ನು ವಿರೋಧಿಸಿ ಬಿಜೆಪಿಯ ಏಕೈಕ ಶಾಸಕ ಸಭಾತ್ಯಾಗ ಮಾಡಿದ್ದಾರೆ.
ಕೇಂದ್ರ ಸರ್ಕಾರವು ನೀಟ್ ಪರೀಕ್ಷಾ ವ್ಯವಸ್ಥೆಯನ್ನು ನಿಷೇಧಿಸಬೇಕು ಮತ್ತು ಪಿಯುಸಿ ಅಂಕಗಳ ಆಧಾರದ ಮೇಲೆ ಯುಜಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶವನ್ನು ಸುಗಮಗೊಳಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಆರೋಗ್ಯ ಸಚಿವ ಕೆ.ಜಿ. ಅರುಣ್‌ರಾಜ್ ಮಂಡಿಸಿದ ನಿರ್ಣಯದಲ್ಲಿ, ರಾಜ್ಯ ಸರ್ಕಾರವು ನೀಟ್ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಒತ್ತಿ ಹೇಳಿದೆ.
ನೀಟ್ ತಮಿಳು ಮಾಧ್ಯಮ ವಿದ್ಯಾರ್ಥಿಗಳು, ಗ್ರಾಮೀಣ ಮತ್ತು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.
ಆಡಳಿತರೂಢ ಟಿವಿಕೆ, ಡಿಎಂಕೆ, ಎಐಎಡಿಎಂಕೆ, ಪಿಎಂಕೆ ಮತ್ತು ಎಡ ಪಕ್ಷಗಳ ಸದಸ್ಯರು ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಬಳಿಕ, ಅದನ್ನು ಅಂಗೀಕರಿಸಲಾಯಿತು. ಬಿಜೆಪಿ ಶಾಸಕ ಭೋಜರಾಜನ್ ನಿರ್ಣಯವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು ಎನ್ನಲಾಗಿದೆ (ಏಜೆನ್ಸೀಸ್).