ತಮಿಳುನಾಡಿನ ಸಿಎಂ ಸಿ. ಜೋಸೆಫ್​ ವಿಜಯ್​  
ದೇಶ

'ದಳಪತಿ'ಯಿಂದ ತಮಿಳುನಾಡು ಸಿಎಂ! ವಿಜಯ್​ ಸನ್ಮಾನಿಸಿ, ಸಂಭ್ರಮಿಸಲು ದೊಡ್ಡ ವೇದಿಕೆಗೆ ಕಾಲಿವುಡ್​ ಸಜ್ಜು

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ ಸಿಎಂ ವಿಜಯ್​ ಅಲೆ ಬಲು ಜೋರು
  • ದಳಪತಿಯಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರಿದ ವಿಜಯ್​ಗೆ ಸನ್ಮಾನ ಕಾರ್ಯಕ್ರಮ
  • ತೆರೆಮರೆಯಲ್ಲಿ ದೊಡ್ಡ ಈವೆಂಟ್​ಗೆ ತಯಾರಿ ನಡೆಸುತ್ತಿದೆ ತಮಿಳು ಚಿತ್ರರಂಗ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು, ಈಗ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಸಿಎಂ ಜೋಸೆಫ್​ ವಿಜಯ್​ಗೆ ಸದ್ಯ ದೇಶವ್ಯಾಪಿ ಅಭಿಮಾನಿಗಳ ಬಳಗ ಜೋರಾಗಿದೆ.
ತಮಿಳುನಾಡಿನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ರಾಜ್ಯದಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಮಾಡಿದ ವಿಜಯ್​, ನಗರ ಸ್ವಚ್ಛತಾ ಕಾರ್ಯದಿಂದ ಹಿಡಿದು ಪ್ರತಿಯೊಂದು ಬಸ್​ಗಳಲ್ಲಿ ಎಸಿ ಅಳವಡಿಸಿರಬೇಕು ಎಂದು ಆದೇಶ ಹೊರಡಿಸುವುದು ಮತ್ತು ಜನರಲ್ಲಿ ತಾನೂ ಕೂಡ ಒಬ್ಬ ಸಾಮಾನ್ಯನಂತೆ ನಡೆದುಕೊಳ್ಳುತ್ತಿರುವುದು ವಿಜಯ್​ ಮೇಲಿನ ನಂಬಿಕೆ, ಭರವಸೆಯನ್ನು ದುಪ್ಪಟ್ಟಾಗಿಸಿದೆ.
ಸಾರಿಗೆ ಬಸ್​ಗಳಲ್ಲಿ ಪ್ರಯಾಣಿಸುವುದು, ಮುಖ್ಯಮಂತ್ರಿಗೆ ಮೀಸಲಿಟ್ಟ ಕಾರನ್ನು ಸ್ವತಃ ತಾವೇ ಓಡಿಸಿಕೊಂಡು ಬರುವುದು ವಿಜಯ್​ ಸರಳತೆಗೆ ಹಿಡಿದ ಕನ್ನಡಿಯಾಗಿದೆ. ಇದೆಲ್ಲವನ್ನೂ ಗಮನಿಸುತ್ತಿರುವ ತಮಿಳು ಚಿತ್ರರಂಗ, ತೆರೆಮರೆಯಲ್ಲಿ ತಮ್ಮ ರಾಜ್ಯದ ಸಿಎಂಗೆ ವಿಶೇಷ ಗೌರವ, ಸನ್ಮಾನ ಸಲ್ಲಿಸಲು ತಯಾರಿ ನಡೆಸುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕುರಿತಾಗಿ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬೀಳದಿದ್ದರೂ ಕಾಲಿವುಡ್​ ತೆರೆಮರೆಯಲ್ಲಿ ದೊಡ್ಡ ಈವೆಂಟ್​ ಹಮ್ಮಿಕೊಳ್ಳಲು ತಯಾರಿ ನಡೆಸುತ್ತಿರುವುದು ಬಹುತೇಕ ನಿಜ ಎಂದೇ ಹೇಳಲಾಗಿದೆ. ವರದಿಗಳ ಪ್ರಕಾರ, ಒಬ್ಬ ಸ್ಟಾರ್​ ನಟನಾಗಿ ಚಿತ್ರರಂಗವನ್ನು ಆಳಿದ ದಳಪತಿ, ಇಂದು ತಮಿಳುನಾಡಿನ ಮುಖ್ಯಮಂತ್ರಿ ಪಟ್ಟದಲ್ಲಿರುವುದು ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಹೀಗಾಗಿ, ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರ ಉನ್ನತ ನಿಯೋಗವು ಶೀಘ್ರದಲ್ಲೇ ಸಿಎಂ ವಿಜಯ್​ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ದೊಡ್ಡ ವೇದಿಕೆಯಲ್ಲಿ ಸನ್ಮಾನಿಸಲು ಸಜ್ಜಾಗಿದೆ ಎನ್ನಲಾಗಿದೆ.

ಒಂದೇ ವೇದಿಕೆಯಲ್ಲಿ ಸೌತ್​ ಕಲಾವಿದರು​

ಮೂಲಗಳ ಪ್ರಕಾರ, ಸಿಎಂ ಅವರಿಂದ ಈ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕರೆ ಉದ್ಯಮಿಗಳ ಈವೆಂಟ್​ಗಿಂತ ಜೋರಾಗಿ ಮಾಡಲು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ಕೇವಲ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಮಾತ್ರವಲ್ಲ, ರಾಜಕೀಯ ಗಣ್ಯರು, ಮಲಯಾಳಂ, ತೆಲುಗು ಮತ್ತು ಕನ್ನಡ ಚಿತ್ರರಂಗದ ಸ್ಟಾರ್​ಗಳು ಆಗಮಿಸುವ ಸಾಧ್ಯತೆಗಳಿವೆ,(ಏಜೆನ್ಸೀಸ್).