- ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಜಯ್
- ಬಹುಮತ ತೋರಿಸಲು ಟಿವಿಕೆ ಪಕ್ಷದ ನಾಯಕನಿಗೆ ಸಂಕಷ್ಟ
- ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂದಾದ ವಿಜಯ್ ಅಸ್ತು ಎನ್ನದ ರಾಜ್ಯಪಾಲರು
ಚೆನ್ನೈ: ಪಂಚರಾಜ್ಯ ಚುನಾವಣೆಯ ಭಾಗವಾಗಿ ತಮಿಳುನಾಡು ವಿಧಾನಸಭಾ ಎಲೆಕ್ಷನ್ನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು (TVK Vijay) ಅಭೂತಪೂರ್ವ ಗೆಲುವು ಸಾಧಿಸಿದೆ. ಒಟ್ಟು 107 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ, ಎಐಡಿಎಂಕೆನಂತಹ ಘಟಾನುಘಟಿ ಪಕ್ಷಗಳನ್ನು ಹಿಂದಿಕ್ಕಿದೆ. ಅಧಿಕ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಸದ್ಯ ಮ್ಯಾಜಿಕ್ ಫಿಗರ್‌ಗೆ ಬೇಕಿರುವ ಇನ್ನೂ 10 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಈ ಮಧ್ಯೆಯೂ, ಸರ್ಕಾರ ರಚಿಸಲು ಅವರ ಉತ್ಸಾಹಕ್ಕೆ ರಾಜ್ಯಪಾಲರಿಂದ ಬೆಂಬಲ ಸಿಗದಿರುವುದು ಸದ್ಯ ಹಲವರನ್ನು ಕೆರಳಿಸಿದೆ.
ಕಾಂಗ್ರೆಸ್ ಪಕ್ಷವು ವಿಜಯ್‌ಗೆ ಬೆಂಬಲವನ್ನು ಘೋಷಿಸಿದ್ದೇ ಆದರೂ ಸರ್ಕಾರ ರಚಿಸಲು ಸಂಪೂರ್ಣ ಬಹುಮತವಿಲ್ಲದ ಕಾರಣ ತಮಿಳುನಾಡು ರಾಜ್ಯಪಾಲರು ಹೊಸ ಸರ್ಕಾರ ರಚಿಸಲು ಅನುಮತಿ ನೀಡಲು ನಿರಾಕರಿಸಿದ್ದಾರೆ. ರಾಜ್ಯಪಾಲರು ಅನುಸರಿಸುತ್ತಿರುವ ಈ ವಿಧಾನಕ್ಕೆ ವಿಜಯ್ ಅಭಿಮಾನಿಗಳು, ಟಿವಿಕೆ ಪಕ್ಷದ ನಾಯಕರು ಮತ್ತು ಸಿನಿಮಾ ತಾರೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯ್ ಅವರಿಗೆ ಸ್ಪಷ್ಟ ಸಾರ್ವಜನಿಕ ಬೆಂಬಲವಿದೆ ಮತ್ತು ಉದ್ದೇಶಪೂರ್ವಕವಾಗಿ ರಾಜ್ಯಪಾಲರು ಅದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಜನರ ತೀರ್ಪಿನ ಬಗ್ಗೆ ರಾಜ್ಯಪಾಲರು ಹೊಂದಿರುವ ಗೌರವ ಇದೇನಾ? ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ಹೊರಹಾಕಿದ್ದಾರೆ. ಇದರ ನಡುವೆ, ನಟರಾದ ಪ್ರಕಾಶ್ ರಾಜ್ ಮತ್ತು ವಿಶಾಲ್ ಕೂಡ ಗವರ್ನರ್ ನಡೆಗೆ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಹಂಚಿಕೊಂಡು ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, "ತಮಿಳುನಾಡು ರಾಜ್ಯಪಾಲರ ನಡವಳಿಕೆ ಸ್ವೀಕಾರಾರ್ಹವಲ್ಲ. ಅವರ ನಿಲುವು ಸಂವಿಧಾನಬಾಹಿರ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ವಿಜಯ್ ಅವರಿಗೆ ಜನರ ಬೆಂಬಲ ಸಿಕ್ಕಿದೆ. ಹೀಗಾಗಿ, ಸದನದಲ್ಲಿ ತಮ್ಮ ಬಲವನ್ನು ಸಾಬೀತುಪಡಿಸಲು ಅವರಿಗೆ ಅವಕಾಶ ನೀಡುವುದು ಸೂಕ್ತ" ಎಂದಿದ್ದಾರೆ.
ಇನ್ನು ನಟ ವಿಶಾಲ್ ಮಾತನಾಡಿ, "2017/18ರಲ್ಲಿ ಗೋವಾ, ಮಣಿಪುರ, ಮೇಘಾಲಯ ಮತ್ತು ಮುಖ್ಯವಾಗಿ ಕರ್ನಾಟಕದಲ್ಲಿ ಸಂಭವಿಸಿದ ಪರಿಸ್ಥಿತಿ ಇಲ್ಲಿಯೂ ನಡೆಯುತ್ತಿದೆ. ಅಲ್ಲಿ ಸರ್ಕಾರ ರಚನೆಯಾದ ನಂತರ, ಅವರನ್ನು ಫ್ಲೋರ್ ಟೆಸ್ಟ್ ಮೂಲಕ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಕೇಳಲಾಯಿತು. ಅದೇ ರೀತಿಯಲ್ಲಿ ದಳಪತಿ ವಿಜಯ್ ಅವರಿಗೂ ಸರ್ಕಾರ ರಚಿಸಲು ಅವಕಾಶ ನೀಡಲು ತಮಿಳುನಾಡು ರಾಜ್ಯಪಾಲರು ಏಕೆ ಹಿಂಜರಿಯುತ್ತಿದ್ದಾರೆ? ಜನರ ತೀರ್ಪಿಗೆ ಕೊಡುವ ಗೌರವ ಇದೇನಾ?" ಎಂದರು.
233 ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ಟಿವಿಕೆ ಬಹುತೇಕ ಬಹುಮತದೊಂದಿಗೆ ಸರ್ಕಾರ ರಚಿಸಲು ಸಿದ್ಧವಾಗಿದೆ. ಜನರು ಇಷ್ಟು ದೊಡ್ಡ ತೀರ್ಪು ಕೊಟ್ಟ ಮೇಲೆ, ಅವರು ಟಿವಿಕೆ ಸರ್ಕಾರವನ್ನು ಬಯಸುತ್ತಾರೆ, ಈ ಮೂಲಭೂತ ಹಕ್ಕುಗಳು ರಾಜಕಾರಣಿಗಳಿಗೆ ಮಾತ್ರವಲ್ಲ, ತಮಿಳುನಾಡಿನ ಅತ್ಯಂತ ಪ್ರಭಾವಿ ಜನರಿಗೂ ತಿಳಿದಿದೆ. ಪ್ರಿಯ ವಿಜಯ್, ನೀವು ಸರ್ಕಾರ ರಚಿಸಬೇಕು, ನೀವಿದನ್ನು ಖಂಡಿತ ಮಾಡುತ್ತೀರಿ. ಒಬ್ಬ ಮತದಾರನಾಗಿ ನಾನು ಬಯಸುವುದು ಇದನ್ನೇ ಎಂದು ವಿಶಾಲ್ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ,(ಏಜೆನ್ಸೀಸ್).