ನಟ ಎಸ್.ಜೆ.ಸೂರ್ಯ ನಟಿಸುತ್ತಿರುವ ಕಿಲ್ಲರ್ ಚಿತ್ರದ ಪೋಸ್ಟರ್
ಚೆನ್ನೈ: ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಮತ್ತು ನಟ ಎಸ್.ಜೆ.ಸೂರ್ಯ(S J Surya) ನಟಿಸುತ್ತಿರುವ ಸಿನಿಮಾವೊಂದರ ಚಿತ್ರೀಕರಣದ ವೇಳೆ ಕಾರ್ಬನ್ ಡೈಆಕ್ಸೈಡ್ ಸಿಲಿಂಡರ್ ಸ್ಫೋಟಗೊಂಡು ಭೀಕರ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬುಧವಾರ(ಜೂ. 03) ಚೆನ್ನೈನ ಪೆರಂಬೂರಿನ ಬಿನ್ನಿ ಮಿಲ್ ಆವರಣದಲ್ಲಿ 'ಕಿಲ್ಲರ್' ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಶೂಟಿಂಗ್ಗೆ ಬಳಸಲಾಗುತ್ತಿದ್ದ ಕಾರ್ಬನ್ ಡೈಆಕ್ಸೈಡ್ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗಿದೆ.
ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ 25 ವರ್ಷದ ಮದನ್ ಎಂಬುವರು ಮೃತಪಟ್ಟಿದ್ದಾರೆ. ಇನ್ನೂ ನಟ ಎಸ್.ಜೆ.ಸೂರ್ಯ ಅವಘಡದ ಸಮಯದಲ್ಲಿ ಸ್ಥಳದಲ್ಲಿದ್ದರೇ, ಇಲ್ಲವೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಘಟನೆ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದುರಂತದ ಬಗ್ಗೆ ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).