Rahul Gandhi | ಲೋಕಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ 
ದೇಶ

ಭಾರತ ಮಾತೆಯನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ?..ಪ್ರಧಾನಿ ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ! | Rahul Gandhi

ದೆಹಲಿ: ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ಇತ್ತೀಚಿನ ಬಜೆಟ್ ಮತ್ತು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಸೇರಿದಂತೆ ಹಲವಾರು ವಿಷಯಗಳ ಕುರಿತು ಸರ್ಕಾರವನ್ನು ಗುರಿಯಾಗಿಸಿಕೊಂಡು ಕಿಡಿ ಕಾರಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ರಾಹುಲ್, ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಾ, ಭಾರತ ಯಾರಿಂದ ತೈಲ ಖರೀದಿಸಬೇಕು, ಖರೀದಿಸಬಾರದು ಎನ್ನುವ ನಿರ್ಧಾರವನ್ನು ಅಮೆರಿಕ ಏಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತಾಗಿ ಮಾತನಾಡಿದ ವಿಪಕ್ಷ ನಾಯಕ ರಾಹುಲ್​, ಇದನ್ನು ಸಂಪೂರ್ಣ ಶರಣಾಗತಿ ಎಂದು ಕರೆದರು. ಉಭಯ ನಾಯಕರ ಈ ಒಪ್ಪಂದಕ್ಕೆ ಯಾವುದೇ ತರ್ಕವಿಲ್ಲ, ಭಾರತವು ಪ್ರಮಾಣಾನುಗುಣ ಪ್ರಯೋಜನಗಳನ್ನು ಪಡೆಯದೆ ಹೆಚ್ಚು ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದರು.
ನಾವು ಇರಾನ್, ರಷ್ಯಾ ಅಥವಾ ಬೇರೆ ಯಾರಿಂದಾದರೂ ತೈಲ ಖರೀದಿಸುತ್ತೇವೆಯೇ ಎಂದು ಅಮೆರಿಕ ಏಕೆ ನಿರ್ಧರಿಸಬೇಕು? ನೀವು ನಮ್ಮ ತಾಯಿ ಭಾರತ ಮಾತೆಯನ್ನು ಮಾರಿದ್ದೀರಿ. ನಿಮಗೆ ಯಾವುದೇ ನಾಚಿಕೆ ಇಲ್ಲ. ಅಮೆರಿಕಾ ಕತ್ತು ಹಿಸುಕಿದ್ದರಿಂದ ಪ್ರಧಾನಿ ಭಾರತವನ್ನು ಮಾರಿದ್ದಾರೆ ಎಂದು ರಾಹುಲ್​ ಕಿಡಿಕಾರಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆಯಲ್ಲಿ, ಅತ್ಯಂತ ಅಮೂಲ್ಯವಾದ ಆಸ್ತಿ ಎಂದರೆ ಅದು ಭಾರತದ ದತ್ತಾಂಶ. ಅಮೆರಿಕನ್ನರು ಸೂಪರ್ ಪವರ್ ಆಗಿ ಉಳಿಯಲು ಮತ್ತು ತಮ್ಮ ಡಾಲರ್ ರಕ್ಷಿಸಿಕೊಳ್ಳಲು ಬಯಸಿದರೆ, ಅದಕ್ಕೆ ಪ್ರಮುಖ ಕಾರಣ ಭಾರತೀಯ ದತ್ತಾಂಶ ಎಂದು ರಾಹುಲ್​ ಗಾಂಧಿ ಹೇಳಿದರು.

ಟ್ರಂಪ್​ಗೆ ಟಾಂಗ್..​

ಲೋಕಸಭೆಯಿಂದಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್​ಗೆ ಸ್ಪಷ್ಟ ಸಂದೇಶ ಕಳುಹಿಸಿದ ರಾಹುಲ್​ ಗಾಂಧಿ, ನಾವು ನಿಮ್ಮ ಸ್ನೇಹಿತರು ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ, ನಿಮ್ಮ ಡಾಲರ್ ರಕ್ಷಿಸಲು ನಾವು ನಿಮಗೆ ಸಹಾಯ ಮಾಡಲು ಬಯಸುತ್ತೇವೆ, ಆದರೆ ನಿಮ್ಮ ಡಾಲರ್ ರಕ್ಷಿಸುವ ಅತಿದೊಡ್ಡ ಆಸ್ತಿ ಭಾರತೀಯ ಜನರ ಬಳಿ ಇದೆ ಎಂಬುದನ್ನು ದಯವಿಟ್ಟು ನೆನಪಿಡಿ. ಅಮೆರಿಕವು ಭಾರತೀಯ ದತ್ತಾಂಶವನ್ನು ಪಡೆಯಲು ಬಯಸಿದರೆ, ನೀವು ನಮ್ಮೊಂದಿಗೆ ಸಮಾನವಾಗಿ ಮಾತನಾಡುವುದರ ಬಗ್ಗೆ ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದರು.

140 ಕೋಟಿ ಭಾರತೀಯರ ಭವಿಷ್ಯ ಅಪಾಯದಲ್ಲಿದೆ: ರಾಹುಲ್

ಉಭಯ ದೇಶಗಳ ನಡುವಿನ ಒಪ್ಪಂದ ದೇಶದ ಜನರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಆರ್ಥಿಕ ವಾಸ್ತುಶಿಲ್ಪವನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು(ಏಜೆನ್ಸೀಸ್​​).