ಸಾಂದರ್ಭಿಕ ಚಿತ್ರ 
ದೇಶ

ಅಫ್ಘಾನ್​ನಲ್ಲಿ ಸಾರ್ವಜನಿಕ ಮರಣ ದಂಡನೆ...ಕುಟುಂಬಸ್ಥರ ಹತ್ಯೆಗೆ ಸೇಡು ತೀರಿಸಿಕೊಂಡ 13ರ ಬಾಲಕ! Taliban

ಪ್ರಮುಖ ಮುಖ್ಯಾಂಶಗಳು

  • ಒಂದೇ ಕುಟುಂಬದ ಒಂಬತ್ತು ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಆರೋಪಿ
  • ಅಫ್ಘಾನಿಸ್ಥಾನದ ಖೋಸ್ಟ್‌ ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆ
  • ಮರಣದಂಡನೆಗೆ ಸುಮಾರು 80,000 ಜನರು ಸಾಕ್ಷಿ
  • ತನ್ನ ಕುಟುಂಬಸ್ಥರ ಹತ್ಯೆಗೆ ಸೇಡು ತೀರಿಸಿಕೊಂಡ 13 ವರ್ಷದ ಬಾಲಕ
Taliban: ಒಂದೇ ಕುಟುಂಬದ ಒಂಬತ್ತು ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಆರೋಪಿಯನ್ನು ಮಂಗಳವಾರ ಅಫ್ಘಾನಿಸ್ಥಾನದ ಖೋಸ್ಟ್‌ ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಮರಣದಂಡನೆಗೆ ಸುಮಾರು 80,000 ಜನರು ಸಾಕ್ಷಿಯಾಗಿದ್ದು, ತನ್ನ ಕುಟುಂಬಸ್ಥರ ಹತ್ಯೆಗೆ 13 ವರ್ಷದ ಬಾಲಕ ಸೇಡು ತೀರಿಸಿಕೊಂಡಿದ್ದಾನೆ.
ತಾಲಿಬಾನ್ ಅಧಿಕಾರಿಗಳು ಶಂಕಿತ ಮಂಗಲ್​ನ್ನು ತಪ್ಪಿತಸ್ಥ ಎಂದು ಅಫ್ಘಾನ್ ಸುಪ್ರೀಂ ಕೋರ್ಟ್ ಗುರುತಿಸಿದ ನಂತರ ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಮರಣದಂಡನೆಗೆ ಸೂಚನೆ ನೀಡಿದ್ದರು.
ಸಾರ್ವಜನಿಕ ಮರಣದಂಡನೆಯು ವ್ಯಾಪಕ ಅಂತರರಾಷ್ಟ್ರೀಯ ಟೀಕೆಗೆ ಗುರಿಯಾಗಿದ್ದು, ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ವಿಶೇಷ ವರದಿಗಾರ ರಿಚರ್ಡ್ ಬೆನೆಟ್ ಇದನ್ನು "ಅಮಾನವೀಯ, ಕ್ರೂರ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ" ಎಂದು ಬಣ್ಣಿಸಿದ್ದಾರೆ.
ಅಫ್ಘಾನಿಸ್ತಾನದ ಸುಪ್ರೀಂ ಕೋರ್ಟ್ ಪ್ರಕಾರ, 2021 ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್ ನಡೆಸಿದ 11 ನೇ ನ್ಯಾಯಾಂಗ ಹತ್ಯೆ ಇದಾಗಿದೆ ಎಂದು ತಿಳಿಸಿದೆ.
ಖೋಸ್ಟ್ ಪ್ರಾಂತ್ಯದಲ್ಲಿ, ಕೊಲೆಗಾರನ ಮೇಲೆ ಕಿಸಾಸ್ (ಪ್ರತೀಕಾರ) ದ ದೈವಿಕ ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಅಫ್ಘಾನ್ ಸುಪ್ರೀಂ ಕೋರ್ಟ್ ಹೇಳಿತ್ತು. ಸಭೆಯ ಕೊನೆಯಲ್ಲಿ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು, ಜನರು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಮತ್ತು ದೇಶಾದ್ಯಂತ ಇಸ್ಲಾಮಿಕ್ ಶರಿಯಾವನ್ನು ಸರಿಯಾಗಿ ಅನುಷ್ಠಾನಗೊಳಿಸಲು ಪ್ರಾರ್ಥನೆಗಳನ್ನು ಮಾಡಲಾಯಿತು.

ಶಂಕಿತನ ಮೇಲೆ ಗುಂಡು ಹಾರಿಸಿ ಸೇಡು ತೀರಿಸಿಕೊಂಡ 13 ವರ್ಷದ ಬಾಲಕ

ಮರಣದಂಡನೆಯನ್ನು ವೀಕ್ಷಿಸಲು ಖೋಸ್ಟ್‌ನ ಕ್ರೀಡಾಂಗಣದಲ್ಲಿ ಬಲಿಪಶುಗಳ ಸಂಬಂಧಿಕರು ಸೇರಿದಂತೆ ಹತ್ತಾರು ಸಾವಿರ ಜನರು ಆಗಮಿಸಿದ್ದರು. ಖೋಸ್ಟ್ ರಾಜ್ಯಪಾಲರ ವಕ್ತಾರ ಮುಸ್ತಾಗ್‌ಫರ್ ಗುರ್ಬಾಸ್, ಸುಮಾರು 10 ತಿಂಗಳ ಹಿಂದೆ ಅಲಿ ಶೀರ್ ಮತ್ತು ಟೆರೆಸಿಯೊ ಜಿಲ್ಲೆಗಳಲ್ಲಿ ಅಬ್ದುಲ್ ರೆಹಮಾನ್ ಮತ್ತು ಅವರ ಕುಟುಂಬ ಸದಸ್ಯರ ಕೊಲೆಯಲ್ಲಿ ಮಂಗಲ್​ ಅಪರಾಧಿ ಎಂದು ಸಾಬೀತು ಪಡಿಸಿದ್ದರು.
ವಿಡಿಯೋ ತೋರಿಸುವಂತೆ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸಾವಿರಾರು ಜನರು ಸೇರಿರುವುದನ್ನು ಕಾಣಬಹುದು. ಈ ವೇಳೆ ಐದು ಗುಂಡುಗಳ ಸದ್ದು ಕೇಳಿ ಬಂದಾಗ ಜನರು ಧಾರ್ಮಿಕ ಘೋಷಣೆಗಳನ್ನು ಕೂಗಿದರು.
ಅಪರಾಧಿ ಮಂಗಲ್ ಮೂಲತಃ ಪಕ್ತಿಯಾ ಪ್ರಾಂತ್ಯದ ಸಜಾಂಗ್ ಪ್ರದೇಶದವನು. ಅವನು ಅಲಿ ಖಾನ್ ಅವರ ಮೊಮ್ಮಗ ಮತ್ತು ಖೋಸ್ಟ್ ಜಿಲ್ಲೆಯ ಅಲಿಶೇರೋ ಮತ್ತು ಟೆರೆಸಿಯೊದ ಕುಸಿ ಅಬುಖಾನಾ ಪ್ರದೇಶದ ನಿವಾಸಿ ಥಾಬಿಟ್ ಅವರ ಮಗ ಅಬ್ದುಲ್ ರೆಹಮಾನ್ ಅವರನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾನೆ ಎಂದು ಅಫ್ಘಾನಿಸ್ತಾನದ ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆಯಲ್ಲಿ ಆದೇಶವನ್ನು ಹೊರಡಿಸಿತ್ತು.
ಪ್ರಥಮ ಹಂತದ ನ್ಯಾಯಾಲಯ, ಮೇಲ್ಮನವಿ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ಶಿಕ್ಷೆಗೆ ಒಳಪಡಿಸಲಾಗಿದೆ ಎಂದು ತಾಲಿಬಾನ್​ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಬಲಿಪಶುಗಳ ಕುಟುಂಬಗಳಿಗೆ ಕ್ಷಮೆ ಮತ್ತು ಸಮನ್ವಯಕ್ಕೆ ಅವಕಾಶ ನೀಡಿದ್ದರು. ಆದರೆ, ಅವರು ಮರಣದಂಡಣೆ ವಿಧಿಸಬೇಕು ಎಂದು ಒತ್ತಾಯಿಸುತ್ತಿದ್ದರು.
13 ವರ್ಷದ ಬಾಲಕ ಮಂಗಲ್ ಅವರನ್ನು ಕ್ಷಮಿಸಲು ಬಯಸುತ್ತೀರಾ ಎಂದು ಕೇಳಿದ ನಂತರ ಬಾಲಕ ಮಾರಕ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಸ್ಥಳೀಯ ಸುದ್ಧಿ ವಾಹಿನಿಗಳು ವರದಿ ಮಾಡಿದೆ.
ಖೋಸ್ಟ್ ಪೊಲೀಸ್ ವಕ್ತಾರ ಮುಸ್ತಾಗ್ಫಿರ್ ಗೋರ್ಬಾಸ್ ಮೃತರ ಗುರುತನ್ನು ದೃಢಪಡಿಸಿದ್ದು, 9 ಮಕ್ಕಳು ಹಾಗೂ ಅವರ ತಾಯಿ ಸೇರಿದಂತೆ ಒಂದು ಕುಟುಂಬದ ದೊಡ್ಡ ಕೊಲೆ ಪ್ರಕರಣವಾಗಿದೆ ಎಂದು ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ನ 'ನ್ಯಾಯ' ವಿಧಾನಗಳು

ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ, ಅವರು ಷರಿಯಾ ಕಾನೂನಿನ ಕಠಿಣ ವ್ಯಾಖ್ಯಾನಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಸಾರ್ವಜನಿಕ ಮರಣದಂಡನೆಗಳು, ಚಾಟಿ ಏಟುಗಳು ಮತ್ತು ಇತರ ದೈಹಿಕ ಶಿಕ್ಷೆಗಳು ಕೂಡಾ ಸೇರಿವೆ. ಇದು 1990 ರ ದಶಕದಲ್ಲಿದ್ದ ಅವರ ಹಳೆಯ ಆಡಳಿತದ ಪದ್ಧತಿಗಳನ್ನು ನೆನಪಿಸುತ್ತದೆ.
ತಾಲಿಬಾನ್‌ನ ನ್ಯಾಯ ವ್ಯವಸ್ಥೆಯನ್ನು ಮಾನವ ಹಕ್ಕುಗಳ ಸಂಸ್ಥೆಗಳು ಅದರ ಪಾರದರ್ಶಕತೆಯ ಕೊರತೆ, ಸರಿಯಾದ ಪ್ರಕ್ರಿಯೆಯ ಕೊರತೆ ಮತ್ತು ಅನ್ಯಾಯಕ್ಕಾಗಿ ಪದೇ ಪದೇ ಟೀಕೆ ವ್ಯಕ್ತಪಡಿಸಿವೆ.
ಈ ಘಟನೆ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ರಿಚರ್ಡ್ ಬೆನೆಟ್ ಮರಣದಂಡನೆಯನ್ನು ಖಂಡಿಸಿದ್ದು, ಸಾರ್ವಜನಿಕ ಮರಣದಂಡನೆಗಳು ಅಮಾನವೀಯ, ಕ್ರೂರ ಮತ್ತು ಅಸಾಮಾನ್ಯ ಶಿಕ್ಷೆಯಾಗಿದೆ. ಇದು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತವೆ ಎಂದು ಹೇಳಿದರು. ಸಾರ್ವಜನಿಕ ಮರಣದಂಡನೆ ಮತ್ತು ಸೇಡಿನ ಹತ್ಯೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಅವರು ತಾಲಿಬಾನ್‌ಗೆ ಕರೆ ನೀಡಿದರು (ಏಜೆನ್ಸೀಸ್​).