ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯ್ ( Actor Vijay )
- ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ
- ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಪ್ರತಿದಿನ ಜೋರಾಗಿದೆ
- ಟಿವಿಕೆ ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯ್ ಇಂದು ಸೇಲಂನಲ್ಲಿ ಅಬ್ಬರದ ಭಾಷಣ ಮಾಡಿದರು
ಚೆನ್ನೈ: ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿರುವ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯ್ ( Actor Vijay ), ಇಂದು ಸೇಲಂನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಅಬ್ಬರದ ಭಾಷಣ ಮಾಡಿ, ಆಡಳಿತಾರೂಢ ಡ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷ ಹಾಗೂ ಸಿಎಂ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಪ್ರಾಯೋಜಿತ ಯೋಜನೆಯಡಿ ಮಹಿಳೆಯರಿಗೆ 'ಮುಂಗಡ ಪಾವತಿ'ಯಾಗಿ 3,000 ರೂ.ಗಳನ್ನು ವರ್ಗಾಯಿಸಿದ್ದಕ್ಕಾಗಿ ಸಿಎಂ ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು ನಟ ವಿಜಯ್ ಟೀಕಾ ಪ್ರಹಾರ ನಡೆಸಿದರು. ಡಿಎಂಕೆ ಪಕ್ಷವನ್ನು 'ದುಷ್ಟ' ಎಂದು ಕರೆದ ವಿಜಯ್, ನೀವು 'ಒಳ್ಳೆಯ' ಟಿವಿಕೆ ಪಕ್ಷಕ್ಕೆ ಮತ ಹಾಕುತ್ತೀರಾ ಅಥವಾ 'ದುಷ್ಟ' ಡಿಎಂಕೆಗೆ ಮತ ಹಾಕುತ್ತೀರಾ? ಎಂದು ಜನರನ್ನು ಪ್ರಶ್ನೆ ಮಾಡಿದರು.
ಮೂರು ಸಾವಿರ ಮಾತ್ರವಲ್ಲದೆ ಬೇಸಿಗೆ ಕೊಡುಗೆ ಭಾಗವಾಗಿ ಪ್ರತಿ ಮಹಿಳೆಗೆ 2,000 ರೂ.ಗಳನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಒಟ್ಟು 5000 ರೂಪಾಯಿ ಹಣವನ್ನು ಸ್ಟಾಲಿನ್ ಸರ್ಕಾರ ಮಹಿಳೆಯರ ಖಾತೆಗೆ ಜಮೆ ಮಾಡಿದೆ. ಈ ಹಣ ಪಾವತಿಯು ಚುನಾವಣೆಯಲ್ಲಿ ಡಿಎಂಕೆ ಗೆಲ್ಲುವುದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂದು ಸೇಲಂನಲ್ಲಿ ನಡೆದ ಪ್ರಚಾರ ಭಾಷಣದ ವೇಳೆ ವಿಜಯ್ ಅವರು ಇದನ್ನೇ ಗುರಿಯಾಗಿಸಿಕೊಂಡು ಡಿಎಂಕೆ ಸರ್ಕಾರದ ವಿರುದ್ಧ ಗುಡುಗಿದರು.
ಸ್ಟಾಲಿನ್ ಸರ್ಕಾರದ ಈ ನಡೆಯನ್ನು ಖಂಡಿಸಿದ ನಟ ವಿಜಯ್, ಡಿಎಂಕೆ ಮತಗಳನ್ನು ಖರೀದಿಸುವ ಪಯತ್ನ ಮಾಡುತ್ತಿದೆ ಎಂದರು. ಇದೇ ಸಮಯದಲ್ಲಿ ತಮಿಳುನಾಡು ಜನತೆಗೆ ಕರೆ ನೀಡಿದ ವಿಜಯ್, ಹಣ ತೆಗೆದುಕೊಳ್ಳಿ ಆದರೆ, ವಿಸಿಲ್ ಹೊಡೆಯಿರಿ ಎಂದರು. ಈ ಮೂಲಕ ತಮ್ಮ ಪಕ್ಷದ ಚಿಹ್ನೆಯಾದ ವಿಸಿಲ್ಗೆ ಮತ ಹಾಕಿ ಎಂದು ಕರೆ ಕೊಟ್ಟರು.
ಈ 'ವಿಶೇಷ ಬೇಸಿಗೆ ಭತ್ಯೆ'ಯನ್ನು ಅಂದರೆ 2,000 ರೂ.ಗಳನ್ನು ಹೇಗೆ ಘೋಷಿಸಲಾಯಿತು? ಬೇಸಿಗೆ ಈ ವರ್ಷ ಮಾತ್ರ ಬರುತ್ತದೆಯೇ? ಇದಕ್ಕೆ ಕಾರಣ ಪ್ರತಿಯೊಂದು ಬೀದಿ ಮತ್ತು ಮನೆಯಲ್ಲಿ ಕೇಳಿಬರುತ್ತಿರುವ ಶಿಳ್ಳೆಯ ಶಬ್ದ ಎಂದು ವಿಜಯ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ತಮ್ಮ ನಾಯಕತ್ವದಲ್ಲಿ ತಮಿಳುನಾಡನ್ನು ನಿಜವಾದ ಕಲ್ಯಾಣ ರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದರು.
ಜನರನ್ನು ಮೂರ್ಖರನ್ನಾಗಿ ಮಾಡುವವರನ್ನು ನಾನು ವಿರೋಧಿಸುತ್ತಿದ್ದೇನೆ. ಅಧಿಕಾರದಲ್ಲಿರುವವರನ್ನು ಗುರಿಯಾಗಿಸಿಕೊಂಡಿದ್ದೇನೆ. ನಾನು ಉತ್ತಮ ಆಡಳಿತ ನೀಡುತ್ತೇನೆ. ನನ್ನನ್ನು ನಂಬುವವರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ ಮತ್ತು ಪೊಳ್ಳು ಭರವಸೆಗಳನ್ನು ನಾನೆಂದಿಗೂ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ವಿಜಯ್ ಹೇಳಿದರು, (ಏಜೆನ್ಸೀಸ್).