IND Vs USA | ಟೀಮ್​ ಇಂಡಿಯಾ ಆಟಗಾರರು 
ದೇಶ

ಸೂರ್ಯನ ತೇಜಸ್ಸಿಗೆ ಕಂಗಾಲಾದ ಅಮೆರಿಕ...ಭಾರತಕ್ಕೆ 29 ರನ್​ಗಳ ಜಯ | IND Vs USA

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಯುಎಸ್​ಎ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 29 ರನ್‌ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಪಂದ್ಯಕ್ಕೂ ಮುನ್ನವೇ ಕ್ರಿಕೆಟ್ ಪಂಡಿತರು ಭಾರತ ತಂಡ ಕನಿಷ್ಠ 250 ರಿಂದ 300 ರನ್‌ಗಳನ್ನು ಗಳಿಸಬಹುದು ಎಂದು ಭವಿಷ್ಯ ನುಡಿದಿದ್ದರು. ಟಾಸ್ ಗೆದ್ದ ಅಮೆರಿಕ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಭಾರತದ ಬ್ಯಾಟರ್‌ಗಳು ಅಬ್ಬರಿಸಲು ಇದಕ್ಕಿಂತ ಉತ್ತಮ ವೇದಿಕೆ ಬೇಕಿರಲಿಲ್ಲ. ಆದರೆ, ಅತಿಯಾದ ಆತ್ಮವಿಶ್ವಾಸ ಅಥವಾ ಆರಂಭಿಕ ಒತ್ತಡವು ಭಾರತದ ಪ್ಲಾನ್‌ಗಳನ್ನು ಸ್ವಲ್ಪ ಮಟ್ಟಿಗೆ ತಲೆಕೆಳಗಾಗಿಸಿತು.
ಅಭಿಷೇಕ್ ಶರ್ಮಾ ಗೋಲ್ಡನ್ ಡಕ್‌ಗೆ ಔಟಾದರು, ಇನ್ನೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ 16 ಎಸೆತಗಳಲ್ಲಿ ಕೇವಲ 20 ರನ್ ಗಳಿಸಿದರು. ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಆಟ ಉತ್ತಮವಾಗಿರಲಿಲ್ಲ. 77 ಕ್ಕೆ 6 ವಿಕೆಟ್​​ ಕಳೆದುಕೊಂಡಿದ್ದ ಟೀಮ್​ ಇಂಡಿಯಾ ಸೂರ್ಯಕುಮಾರ್ 49 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿ ಭಾರತವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್‌ಗಳಿಗೆ ಎಳೆದೊಯ್ದರು.
ಯುಎಸ್ಎ ಪರ, ಶಾಡ್ಲಿ ವ್ಯಾನ್ ಶಾಲ್ಕ್‌ವೈಕ್ ನಾಲ್ಕು ವಿಕೆಟ್‌ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ಅಮೆರಿಕ ತಂಡ ಆರಂಭಿಕ ಆಘಾತದ ಹೊರತಾಗಿ ದಿಟ್ಟ ಹೋರಾಟ ಪ್ರದರ್ಶಿಸಿದರು. ಅನುಭವಿ ಭಾರತೀಯ ಬೌಲರ್‌ಗಳ ವಿರುದ್ಧ ದೊಡ್ಡ ಹೊಡೆತಗಳನ್ನು ಬಾರಿಸಲು ಮುಂದಾಗಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಯುಎಸ್​​ಎ ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್​​ ಕಳೆದುಕೊಂಡು 132 ರನ್​ ಗಳಿಸಿತು.
ಮಿಲಿಂದ್ ಕುಮಾರ್ 34, ಶುಭಂ ರಂಜನೆ 37 ಮತ್ತು ಸಂಜಯ್​ ಕೃಷ್ಣಮೂರ್ತಿ 37 ರನ್​ ಬಾರಿಸಿ ಯುಎಸ್​ಎ ಉತ್ತಮ ಹೋರಾಟ ನೀಡಲು ಕಾರಣರಾದರು. ಟೀಮ್​ ಇಂಡಿಯಾ ಪರ ಸಿರಾಜ್ 3, ಅರ್ಷದೀಪ್​, ಅಕ್ಷರ್​ ಪಟೇಲ್​ ತಲಾ 2 ವಿಕೆಟ್​ ಪಡೆದು ಮಿಂಚಿದರು(ಏಜೆನ್ಸೀಸ್​).​