- ಭಾರತ ಮತ್ತು ಬಾಂಗ್ಲಾದೇಶದ ನಡುವೆ ಉದ್ವಿಗ್ನ ಪರಿಸ್ಥಿತಿ
- ಟಿ20 ವಿಶ್ವಕಪ್‌ನ ಬಾಂಗ್ಲಾದೇಶದ ಪಂದ್ಯಗಳನ್ನು ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಸಕ್ತಿ
- ಐಸಿಸಿ ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ
ಪಾಕಿಸ್ತಾನ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ, ಮುಂಬರುವ ಪುರುಷರ ಟಿ 20 ವಿಶ್ವಕಪ್(T20 World Cup)ನ ಬಾಂಗ್ಲಾದೇಶದ ಪಂದ್ಯಗಳನ್ನು ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿ ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ ನಂತರ ಪಿಸಿಬಿ ತನ್ನ ಸಂಪೂರ್ಣ ಸುಸಜ್ಜಿತ ಸ್ಟೇಡಿಯಂಗಳನ್ನು ಬಾಂಗ್ಲಾದೇಶದ ಪಂದ್ಯಗಳ ಆಯೋಜನೆಗೆ ಬಳಸಿಕೊಳ್ಳಬಹುದು ಎಂಬ ಹೇಳಿಕೆ ನೀಡಿದೆ.
ಭಾರತದಲ್ಲಿ ತನ್ನ ಆಟಗಾರರ ಭದ್ರತೆಯ ಬಗ್ಗೆ ಕಳವಳ ವ್ಯಕ್ತ ಪಡಿಸಿರುವ ಬಿಸಿಬಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜತೆ ಚರ್ಚೆಯಲ್ಲಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಮುಂಬೈನಲ್ಲಿದ್ದು, ಅಂತರರಾಷ್ಟ್ರೀಯ ಸಂಸ್ಥೆಯ ಇತರ ಪ್ರತಿನಿಧಿಗಳೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಚೇರಿಯಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ.
ಬಾಂಗ್ಲಾದೇಶ ತಂಡವು ತನ್ನ ಮೊದಲ ಮೂರು ಗುಂಪು ಹಂತದ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಮತ್ತು ಕೊನೆಯ ಪಂದ್ಯವನ್ನು ಮುಂಬೈನಲ್ಲಿ ಆಡಲಿದೆ. ವರದಿಗಳ ಪ್ರಕಾರ, ಐಸಿಸಿ ಬಿಸಿಬಿ ಮನವಿಯನ್ನು ತಿರಸ್ಕರಿಸಿದೆ. ಆದರೆ ಬಾಂಗ್ಲಾದೇಶ ಮಂಡಳಿಯು ತನ್ನ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದು, ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಕೂಡ ಹೇಳಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ವರದಿಗಳ ನಂತರ ಬಾಂಗ್ಲಾದೇಶ ವಿರೋಧಿ ಭಾವನೆ ಜನ್ಮತಾಳಿತ್ತು. ಇದೇ ವೇಳೆ 2026 ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.2 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿಕೊಂಡ ನಂತರ ಆಕ್ರೋಶ ಭುಗಿಲೆದ್ದಿತು.
ಜನವರಿ ಆರಂಭದಲ್ಲಿ ಬಿಸಿಸಿಐ, ಕೆಕೆಆರ್‌ಗೆ ರೆಹಮಾನ್ರನ್ನು ಬಿಡುಗಡೆ ಮಾಡುವಂತೆ ನಿರ್ದೇಶಿಸಿದಾಗ ಪರಿಸ್ಥಿತಿ ತೀವ್ರಗೊಂಡಿತು.ಈ ನಿರ್ಧಾರವು ಬಾಂಗ್ಲಾದೇಶವನ್ನು ಕೆರಳಿಸಿ, ಮಾಜಿ ಕ್ರಿಕೆಟಿಗರು, ಬಿಸಿಬಿ ಮತ್ತು ಸರ್ಕಾರಿ ಅಧಿಕಾರಿಗಳು ಇದನ್ನು ರಾಜಕೀಯ ಪ್ರೇರಿತ ಎಂದು ಕರೆದರು. ಢಾಕಾ ಐಪಿಎಲ್ ಪ್ರಸಾರದ ಮೇಲೆ ಅನಿರ್ದಿಷ್ಟಾವಧಿ ನಿಷೇಧವನ್ನು ಸಹ ವಿಧಿಸಿದೆ.
ಪಿಸಿಬಿ ಮತ್ತು ಅದರ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರೊಂದಿಗಿನ ಭಾರತದ ಸಂಬಂಧಗಳುಏಷ್ಯಾ ಕಪ್ ಟ್ರೋಫಿ ಸಂದರ್ಭದಿಂದ ಹದಗೆಟ್ಟದೆ. ಹೀಗಾಗಿ ಎಲ್ಲಾ ಭಾರತ-ಪಾಕಿಸ್ತಾನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವ ವ್ಯವಸ್ಥೆಯನ್ನು ಬಿಸಿಸಿಐ, ಪಿಸಿಬಿ ಮತ್ತು ಐಸಿಸಿ ಹೊಂದಿದ್ದು, ಪಾಕಿಸ್ತಾನವು ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ,(ಏಜನ್ಸೀಸ್).