ಘಟನೆಯ ಸ್ಥಳ 
ದೇಶ

ದೆಹಲಿ ಏರ್​​ಪೋರ್ಟ್​ನಲ್ಲಿ ಟೇಕ್​ ಆಪ್ ವೇಳೆ ಸ್ವಿಸ್ ವಿಮಾನಕ್ಕೆ ಬೆಂಕಿ, ತುರ್ತು ಲ್ಯಾಂಡ್; ಆರು ಮಂದಿಗೆ ಗಾಯ | Swiss plane

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ(ಏ. 26) ಮುಂಜಾನೆ ಜ್ಯೂರಿಚ್​ಗೆ ತೆರಳುತ್ತಿದ್ದ ಸ್ವಿಸ್ ವಿಮಾನ(Swiss plane) ಟೇಕ್​ ಆಫ್​ ಆದ ಕೆಲವೇ ಕ್ಷಣಗಳಲ್ಲಿ ಒಂದು ಇಂಜಿನ್ ವಿಫಲವಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬೆಳಗಿನ ಜಾವ 1 ಗಂಟೆಗೆ ಈ ಅಪಘಾತ ಸಂಭವಿಸಿದೆ. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡ ತಕ್ಷಣ ಪೈಲಟ್​ಗಳ ಟೇಕ್​ ಆಫ್​ ಅನ್ನು ಸ್ಥಗಿತಗೊಳಿಸಿ ತುರ್ತು ಲ್ಯಾಂಡಿಂಗ್ ಮಾಡಿದ್ದು, ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ತುರ್ತು ಸ್ಲೈಡ್​ಗಳ ಮೂಲಕ ಇಳಿಸಿದ್ದಾರೆ. ಈ ವೇಳೆ ಉಂಟಾದ ಅವ್ಯವಸ್ಥೆಯಲ್ಲಿ ಒಟ್ಟು ಆರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, ಏರ್‌ಬಸ್ A330 ವಿಮಾನದಲ್ಲಿ ಸುಮಾರು 228 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಬೆಂಕಿ ಕಾಣಿಸಿಕೊಂಡಾಗ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅಪಘಾತವನ್ನು ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಘಟನೆ ಕುರಿತಿ ಸ್ವಿಸ್ ಏರ್​ಲೈನ್ಸ್​ ಪ್ರತಿಕ್ರಿಯಿಸಿದ್ದು, ಭಾನುವಾರ ಮುಂಜಾನೆ 1 ಗಂಟೆ ಸುಮಾರಿಗೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ವಿಮಾನದ ಎಂಜಿನ್‌ಗಳಲ್ಲಿ ಒಂದರಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಸಿಬ್ಬಂದಿ ಮುನ್ನೆಚ್ಚರಿಕೆಯಾಗಿ ಟೇಕ್ ಆಫ್ ಅನ್ನು ಸ್ಥಗಿತಗೊಳಿಸಿ ವಿಮಾನವನ್ನು ಸ್ಥಳಾಂತರಿಸಿದರು. ಪ್ರಸ್ತುತ ಆರು ಪ್ರಯಾಣಿಕರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ (ಏಜೆನ್ಸೀಸ್).