AAP exodus | ಸಾಮೂಹಿಕ ಪಕ್ಷಾಂತರಕ್ಕೆ ಕಾರಣವಾದ ಆ ನಿರ್ಣಾಯಕ ಕ್ಷಣಗಳು ಇಲ್ಲಿವೆ! 
ದೇಶ

ಮಲಿವಾಲ್ ಹಲ್ಲೆ ಪ್ರಕರಣದಿಂದ ಚಡ್ಡಾ ಉಚ್ಚಾಟನೆಯವರೆಗೆ...​ಸಾಮೂಹಿಕ ಪಕ್ಷಾಂತರಕ್ಕೆ ಕಾರಣವಾದ ಆ ನಿರ್ಣಾಯಕ ಕ್ಷಣಗಳು ಇಲ್ಲಿವೆ! | AAP exodus

AAP exodus: ಆಮ್ ಆದ್ಮಿ ಪಕ್ಷದ ಆಂತರಿಕ ಬಿಕ್ಕಟ್ಟು ನಿನ್ನೆ (ಶುಕ್ರವಾರ ಏ-24) ಸ್ಫೋಟಕ ಹಂತ ತಲುಪಿದ್ದು, ರಾಘವ್ ಛಡ್ಡಾ ನೇತೃತ್ವದಲ್ಲಿ ಏಳು ರಾಜ್ಯಸಭಾ ಸದಸ್ಯರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಎಎಪಿಯ ಭದ್ರಕೋಟೆಯನ್ನು ನಡುಗಿಸಿದೆ. ಈ ಹಠಾತ್ ಬೆಳವಣಿಗೆಯು ಕೇವಲ ರಾಜಕೀಯ ಪಲ್ಲಟವಲ್ಲ, ಬದಲಿಗೆ ಕಳೆದ ಹಲವು ತಿಂಗಳುಗಳಿಂದ ಪಕ್ಷದೊಳಗೆ ಮಡುಗಟ್ಟಿದ್ದ ಅತೃಪ್ತಿ, ಅಧಿಕಾರ ಹೋರಾಟ ಮತ್ತು ನಾಯಕತ್ವದ ಮೇಲಿನ ಅಪನಂಬಿಕೆಯ ಪರಾಕಾಷ್ಠೆಯಾಗಿದೆ.
ಈ ಬಿಕ್ಕಟ್ಟಿನ ಮೂಲ 2024ರ ಮೇ ತಿಂಗಳಲ್ಲಿ ನಡೆದ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆಯ ಆರೋಪದಲ್ಲಿ ಅಡಗಿದೆ ಎನ್ನಲಾಗಿದ್ದು, ಅಂದು ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಈ ಘಟನೆಯು ಪಕ್ಷದೊಳಗೆ ಮೊದಲ ಬಿರುಕನ್ನು ಸೃಷ್ಟಿಸಿತು. ನಂತರದ ದಿನಗಳಲ್ಲಿ ರಾಘವ್ ಛಡ್ಡಾರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು.
ಆಮ್ ಆದ್ಮಿ ಪಕ್ಷದಲ್ಲಿ ಅತ್ಯಂತ ವೇಗವಾಗಿ ಬೆಳೆದ ನಾಯಕರಲ್ಲಿ ರಾಘವ್ ಛಡ್ಡಾ ಪ್ರಮುಖರು. ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್​​ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು, 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಪಕ್ಷದ ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮಿದರು. ಮುಖ್ಯಮಂತ್ರಿ ಭಗವಂತ್ ಮಾನ್ ನಂತರ ರಾಜ್ಯದ ಅತ್ಯಂತ ಶಕ್ತಿಶಾಲಿ ನಾಯಕನಾಗಿ ಚಡ್ಡಾ ಗುರುತಿಸಿಕೊಂಡಿದ್ದರು.
ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್​​​​ರಂತಹ ಹಿರಿಯ ನಾಯಕರು ಕಾನೂನು ಸಂಘರ್ಷಗಳನ್ನು ಎದುರಿಸುತ್ತಿದ್ದ ನಿರ್ಣಾಯಕ ಸಂದರ್ಭದಲ್ಲಿ, ಛಡ್ಡಾ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ ಎಂಬ ಆರೋಪ ಕೇಳಿಬಂದಿತು. ಈ ಅಂತರ ಕಾಯ್ದುಕೊಳ್ಳುವ ಧೋರಣೆಯಿಂದಾಗಿ ನಾಯಕತ್ವವು ಅವರ ಮೇಲೆ ಅಸಮಾಧಾನಗೊಂಡಿತು. ಇದರ ಪರಿಣಾಮವಾಗಿ, ಪಂಜಾಬ್ ವ್ಯವಹಾರಗಳ ಸಹ-ಉಸ್ತುವಾರಿ ಮತ್ತು ಚುನಾವಣಾ ತಂತ್ರಜ್ಞನಂತಹ ಪ್ರಮುಖ ಜವಾಬ್ದಾರಿಗಳಿಂದ ಅವರನ್ನು ಹಂತಹಂತವಾಗಿ ಮುಕ್ತಗೊಳಿಸಲಾಯಿತು.

ಕೇಂದ್ರ ಸಂಸ್ಥೆಗಳ ಮೇಲಿನ ಭಯದಿಂದ ಈ ಬೆಳವಣಿಗೆ..

ಪಕ್ಷ ತೊರೆದವರ ಪಟ್ಟಿಯಲ್ಲಿ ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಹ್ನಿ ಮತ್ತು ಸಂದೀಪ್ ಪಾಠಕ್ ಅವರಂತಹ ಪ್ರಮುಖ ನಾಯಕರಿದ್ದಾರೆ. ವಿಶೇಷವಾಗಿ ಅಶೋಕ್ ಮಿತ್ತಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಬೆನ್ನಲ್ಲೇ ಈ ರಾಜೀನಾಮೆಗಳು ಬಂದಿರುವುದು ಗಮನಿಸಬೇಕಾದ ಸಂಗತಿ. ಈ ಬೆಳವಣಿಗೆಯನ್ನು ಎಎಪಿ ನಾಯಕ ಸಂಜಯ್ ಸಿಂಗ್, ಬಿಜೆಪಿಯ ಆಪರೇಷನ್ ಕಮಲ ಎಂದು ಕರೆದಿದ್ದು, ಕೇಂದ್ರ ಸಂಸ್ಥೆಗಳ ಭಯದಿಂದ ಸಂಸದರು ಪಕ್ಷಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ವಾತಿ ಮಲಿವಾಲ್ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಆಪ್​ನಲ್ಲಿ ಭ್ರಷ್ಟಾಚಾರ, ಮಹಿಳೆಯರ ಮೇಲಿನ ಕಿರುಕುಳ ಮತ್ತು ಗೂಂಡಾಗಿರಿ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂದು ದೂರಿದ್ದಾರೆ. ರಾಜೀನಾಮೆ ನೀಡಿದ ಬಹುತೇಕ ಸಂಸದರು ಪಂಜಾಬ್ ಮೂಲದವರಾಗಿದ್ದು, ಮುಂಬರುವ ಪಂಜಾಬ್, ಗುಜರಾತ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳ ಹೊಸ್ತಿಲಲ್ಲಿ ಆಮ್​ ಆದ್ಮಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ(ಏಜೆನ್ಸೀಸ್​​).