ದೇವರೆ ದಯವಿಟ್ಟು ನನ್ನ ಅತ್ತೆಯನ್ನು ಬಾರದ ಲೋಕಕ್ಕೆ ಕಳುಹಿಸಿಕೊಡು...20 ರೂ. ಕಾಣಿಕೆಯಲ್ಲಿ ಸಾವಿನ ಬೇಡಿಕೆಯಿಟ್ಟ ಭಕ್ತೆ! Prayer To God 
ದೇಶ

ದೇವರೆ ದಯವಿಟ್ಟು ನನ್ನ ಅತ್ತೆಯನ್ನು ಬಾರದ ಲೋಕಕ್ಕೆ ಕಳುಹಿಸಿಕೊಡು...20 ರೂ. ಕಾಣಿಕೆಯಲ್ಲಿ ಸಾವಿನ ಬೇಡಿಕೆಯಿಟ್ಟ ಭಕ್ತೆ! Prayer To God

ಪ್ರಮುಖ ಮುಖ್ಯಾಂಶಗಳು

  • ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದಾಗ ಭಕ್ತರು ದಂಗಾಗುವಂತಹ ವಿಲಕ್ಷಣ ಘಟನೆ ಬೆಳಕಿಗೆ
  • ಹುಂಡಿಗೆ ಹಾಕಿದ 20 ರೂ. ನೋಟಿನ ಕಾಣಿಕೆಯಲ್ಲಿ ವಿಚಿತ್ರ ಬೇಡಿಕೆಯನ್ನಿಟ್ಟ ಭಕ್ತೆ
  • ಅನಂತಪುರ ಜಿಲ್ಲೆಯ ಪ್ರಸಿದ್ಧ ಪಂಪನೂರು ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಘಟನೆ
  • ಅತ್ತೆಯ ಕಾಟ ತಡೆಯಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಆಕೆ ಬೇಗ ಸಾಯಲಿ ಎಂದು ಬೇಡಿದ ಭಕ್ತೆ
Prayer To God : ಅನಂತಪುರ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದಾಗ ಭಕ್ತರು ದಂಗಾಗುವಂತಹ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದ್ದು, 20 ರೂಪಾಯಿ ನೋಟು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಸಾಮಾನ್ಯವಾಗಿ ಭಕ್ತರು ದೇವಸ್ಥಾನಕ್ಕೆ ಬಂದು ಆರೋಗ್ಯ, ಉದ್ಯೋಗ, ಶಿಕ್ಷಣ ಹಾಗೂ ಆರ್ಥಿಕ ಪ್ರಗತಿಗಾಗಿ ದೇವರಲ್ಲಿ ಪ್ರಾರ್ಥಿಸುವುದು ವಾಡಿಕೆ, ಆದರೆ ಈ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ತನ್ನ ಅತ್ತೆಯ ಕಾಟ ಹಾಗೂ ಕಿರುಕುಳದಿಂದ ಮುಕ್ತಿ ಕೊಡು ಎಂದು 20 ರೂಪಾಯಿ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
ಅನಂತಪುರ ಜಿಲ್ಲೆಯ ಆತ್ಮಕೂರು ಮಂಡಲದ ಪ್ರಸಿದ್ಧ ಪಂಪನೂರು ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ (ಜೂನ್ 18) ಅಧಿಕಾರಿಗಳು ಹುಂಡಿ ಎಣಿಕೆ ಕಾರ್ಯ ನಡೆಸುತ್ತಿದ್ದಾಗ ಈ ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ.
ಭಕ್ತರು ಅರ್ಪಿಸಿದ್ದ ನಗದು ಮತ್ತು ಕಾಣಿಕೆಗಳನ್ನು ಪರಿಶೀಲಿಸುವಾಗ 20 ರೂಪಾಯಿ ನೋಟಿನ ಮೇಲೆ ಬರೆದಿದ್ದ ಸಂದೇಶವೊಂದು ಅಧಿಕಾರಿಗಳ ಗಮನ ಸೆಳೆದಿದ್ದು, ಅದರಲ್ಲಿ "ಸ್ವಾಮಿ.. ನನಗೆ ನನ್ನ ಅತ್ತೆಯ ಕಾಟ ತಡೆಯಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಆಕೆ ಬೇಗ ಸಾಯುವಂತೆ ಮಾಡು" ಎಂದು ಕೈಬರಹದಲ್ಲಿ ಬರೆಯಲಾಗಿತ್ತು. ಇದನ್ನು ಕಂಡು ದೇವಸ್ಥಾನದ ಸಿಬ್ಬಂದಿ ಹಾಗೂ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದು, ಇದರೊಂದಿಗೆ ಇಂಗ್ಲಿಷ್‌ನಲ್ಲಿ ಬರೆದಿದ್ದ ಮತ್ತೊಂದು ನೋಟು ಕೂಡ ಪತ್ತೆಯಾಗಿದೆ.
ಈ ವಿಲಕ್ಷಣ ಪ್ರಾರ್ಥನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೌಟುಂಬಿಕ ಕಲಹಗಳು ಹಾಗೂ ಅತ್ತೆ-ಸೊಸೆಯ ನಡುವಿನ ಭಿನ್ನಾಭಿಪ್ರಾಯಗಳು ಈ ಮಟ್ಟಕ್ಕೆ ತಲುಪಿದಾಗ ಮಾತ್ರ ಇಂತಹ ಬೇಡಿಕೆಯನ್ನು ದೇವರ ಮುಂದೆ ಇಡಲು ಸಾಧ್ಯ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.
ಕೆಲವರು ಇದನ್ನು ಕೇವಲ ತಮಾಷೆಯಾಗಿ ಪರಿಗಣಿಸುತ್ತಿದ್ದರೆ, ಇನ್ನು ಕೆಲವರು ಇದು ಇಂದಿನ ಸಮಾಜದಲ್ಲಿ ಕೌಟುಂಬಿಕ ಸಮಸ್ಯೆಗಳು ಎಷ್ಟು ಗಂಭೀರ ರೂಪ ಪಡೆದುಕೊಳ್ಳುತ್ತಿವೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಭಕ್ತರು ತಮ್ಮ ಆಸೆ, ಅನಿಸಿಕೆಗಳನ್ನು ಕಾಗದದ ಮೇಲೆ ಬರೆದು ದೇವಸ್ಥಾನದ ಹುಂಡಿಗಳಿಗೆ ಹಾಕುವುದು ಹೊಸದೇನಲ್ಲ. ಆದರೆ, ಹೀಗೆ ನೇರವಾಗಿ ಕರೆನ್ಸಿ ನೋಟಿನ ಮೇಲೆಯೇ ಮತ್ತೊಬ್ಬರ ಸಾವನ್ನು ಬಯಸಿ ಪ್ರಾರ್ಥನೆ ಬರೆದಿರುವುದು ತೀರಾ ಅಪರೂಪದ ಸಂಗತಿಯಾಗಿದೆ. ಸದ್ಯ ಅನಂತಪುರ ಜಿಲ್ಲೆಯಾದ್ಯಂತ ಈ ವಿಚಿತ್ರವಾದ ಬೇಡಿಕೆಯ ನೋಟೇ ಅತ್ಯಂತ ಬಿಸಿಬಿಸಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ, (ಏಜೆನ್ಸೀಸ್​).