ಸುವೇಂದು ಆಪ್ತನ ಭೀಕರ ಹತ್ಯೆ: ಹಂತಕರ ಬಗ್ಗೆ ಚಂದ್ರನಾಥ್ ರಥ್ ತಾಯಿ ನೀಡಿದ ಹೇಳಿಕೆಗೆ ಬೆಚ್ಚಿಬಿದ್ದ ಬಂಗಾಳ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದೆ. ಬಿಜಿಪಿ ನಾಯಕ ಮತ್ತು ನೂತನ ಶಾಸಕ ಸುವೇಂದು ಅಧಿಕಾರಿ ಅವರ ಅತ್ಯಂತ ನಂಬಿಕಸ್ತ ಆಪ್ತ ಹಾಗೂ ವೈಯಕ್ತಿಕ ಸಹಾಯಕ ಚಂದ್ರನಾಥ್ ರಥ್(Chandranath Rath Murder Case) ಅವರನ್ನು ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ: ಯೋಜಿತ ಸಂಚು..?
ಬುಧವಾರ ರಾತ್ರಿ ಚಂದ್ರನಾಥ್ ರಥ್ ಅವರು ಕೋಲ್ಕತ್ತಾದಿಂದ ಮಧ್ಯಮಗ್ರಾಮದಲ್ಲಿರುವ ತಮ್ಮ ನಿವಾಸಕ್ಕೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ನಾಲ್ಕು ಮೋಟಾರ್ ಸೈಕಲ್‌ಗಳಲ್ಲಿ ಬಂದ ದುಷ್ಕರ್ಮಿಗಳು ರಥ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಅತ್ಯಂತ ನಿಕಟವಾಗಿ ಗುಂಡು ಹಾರಿಸಲಾಗಿದ್ದು, ರಥ್ ಅವರ ದೇಹಕ್ಕೆ ಮೂರು ಗುಂಡುಗಳು ತಗುಲಿವೆ. ಈ ದಾಳಿಯಲ್ಲಿ ಕಾರು ಚಾಲಕ ಬುದ್ಧದೇವ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಸ್ಥಳದಲ್ಲಿ ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದು, ಈ ಕೃತ್ಯದಲ್ಲಿ Glock 47X ನಂತಹ ಅತ್ಯಾಧುನಿಕ ಬಂದೂಕುಗಳನ್ನು ಬಳಸಿರುವ ಶಂಕೆಯಿದೆ. ಇದು ಅತ್ಯಂತ ವ್ಯವಸ್ಥಿತವಾಗಿ ನಡೆದ ಹತ್ಯೆಯಾಗಿದ್ದು. ಕೃತ್ಯಕ್ಕೆ ಬಳಸಲಾದ ಅನುಮಾನಾಸ್ಪದ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಅದಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು ಎಂದು ಪಶ್ಚಿಮ ಬಂಗಾಳದ ಡಿಜಿಪಿ ಸಿದ್ಧಿನಾಥ್ ಗುಪ್ತಾ ತಿಳಿಸಿದ್ದಾರೆ.
ತಾಯಿಯ ಕಣ್ಣೀರು ಮತ್ತು ಆಕ್ರೋಶ
ಘಟನೆಯ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಚಂದ್ರನಾಥ್ ಅವರ ತಾಯಿ ಹಾಸಿರಾಣಿ ರಥ್, ಮಗನ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದಾರೆ. ನನ್ನ ಮಗನನ್ನು ಹತ್ಯೆ ಮಾಡಿದ್ದು ತೃಣಮೂಲ ಕಾಂಗ್ರೆಸ್ ಗೂಂಡಾಗಳು. ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಅವರು ಮಮತಾ ಅವರನ್ನು ಸೋಲಿಸಿದ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಆದರೆ, ಒಬ್ಬ ತಾಯಿಯಾಗಿ ಅವರು ತೋರಿದ ಔದಾರ್ಯ ಎಲ್ಲರ ಗಮನ ಸೆಳೆದಿದೆ. ನನಗೆ ನ್ಯಾಯ ಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ. ಆದರೆ ನಾನು ಒಬ್ಬ ತಾಯಿ, ಅವರು ನನ್ನ ಮಗನನ್ನು ಕೊಂದಿದ್ದರೂ ನಾನು ಅವರಿಗೆ ಗಲ್ಲು ಶಿಕ್ಷೆಯನ್ನು ಬಯಸುವುದಿಲ್ಲ. ಅವರಿಗೆ ಜೀವಾವಧಿ ಶಿಕ್ಷೆಯಾಗಲಿ, ಅವರು ಸಾಯುವವರೆಗೂ ಜೈಲಿನಲ್ಲೇ ಕೊಳೆಯಲಿ ಎಂದು ಕಣ್ಣೀರಿಡುತ್ತಾ ನುಡಿದಿದ್ದಾರೆ.
ರಾಜಕೀಯ ಸಂಘರ್ಷದ ಹಿನ್ನೆಲೆ
2026ರ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಭವಾನಿಪುರದಲ್ಲಿ 15,105 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಐತಿಹಾಸಿಕ ಗೆಲುವಿನ ನಂತರ ರಾಜ್ಯದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಸಂಘರ್ಷ ತಾರಕಕ್ಕೇರಿದೆ. ಮೇ 4ರ ನಂತರ ದೆಹಲಿಯ ಅಪ್ಪಂದಿರು ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ ಎಂಬಂತಹ ಪ್ರಚೋದನಾಕಾರಿ ಹೇಳಿಕೆಗಳೇ ಈ ಹತ್ಯೆಗೆ ಪ್ರೇರಣೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.
ಮಾಜಿ ವಾಯುಪಡೆ ಅಧಿಕಾರಿಯಾಗಿದ್ದ ಚಂದ್ರನಾಥ್ ರಥ್ ಅವರು ಸುವೇಂದು ಅಧಿಕಾರಿ ಅವರ ಪ್ರತಿಯೊಂದು ರಾಜಕೀಯ ಕಾರ್ಯತಂತ್ರದ ಹಿಂದೆ ಇರುತ್ತಿದ್ದರು. ಅವರ ಸಾವು ಸುವೇಂದು ಅಧಿಕಾರಿಯವರಿಗೆ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ದೊಡ್ಡ ಹೊಡೆತ ನೀಡಿದೆ.
ತನಿಖೆ ಚುರುಕು
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಿಐಡಿ ತಂಡವು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಬಿಜೆಪಿ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿದೆಯಾದರೂ, ಈ ಹತ್ಯೆಯು ಬಂಗಾಳದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವ ಲಕ್ಷಣಗಳು ದಟ್ಟವಾಗಿವೆ,(ಏಜೆನ್ಸೀಸ್).