ಸಿಎಂ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ 
ದೇಶ

ಕಲ್ಲಿದ್ದಿಲು ಹಗರಣದ ಆರೋಪ ಹೇಳಿಕೆ: ಸಿಎಂ ಮಮತಾ ಬ್ಯಾನರ್ಜಿಗೆ ಲೀಗಲ್ ನೋಟಿಸ್ ಕಳುಹಿಸಿದ ಸುವೇಂದು ಅಧಿಕಾರಿ | Suvendu Adhikari

ಕೋಲ್ಕತ್ತಾ: ಕಲ್ಲಿದ್ದಿಲು ಕಳ್ಳಸಾಗಾಣೆ ಆರೋಪ ಪ್ರಕರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಹಣ ಹೋಗಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಇಡಿಯಿಂದ ನಡೆಯುತ್ತಿರುವ ತನಿಖೆಯ ಗಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನದಲ್ಲಿ ಸಿಎಂ ಮಮತಾ ಬ್ಯಾನರ್ಜಿಯವರು ನನ್ನ ವಿರುದ್ಧ ಸಂಪೂರ್ಣವಾಗಿ ಆಧಾರರಹಿತ ಮಾನನಷ್ಟ ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ಗೌರವಾನ್ವಿತ ಕೇಂದ್ರ ಗೃಹ ಸಚಿವರ ಜೊತೆಗೆ 'ಆಪಾದಿತ' ಕಲ್ಲಿದ್ದಲು ಹಗರಣಕ್ಕೆ ನನ್ನನ್ನು ಜೋಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ವೈಯಕ್ತಿಕವಾಗಿ ನಷ್ಟವನ್ನುಂಟು ಮಾಡುವ ಇಂತಹ ಆರೋಪಗಳನ್ನು ಯಾವುದೇ ಪುರಾವೆಯಿಲ್ಲದೇ ಸಾರ್ವಜನಿಕವಾಗಿ ಮಾಡಲಾಗಿದೆ. ಇದು ನನ್ನ ಖ್ಯಾತಿಗೆ ಧಕ್ಕೆ ತಂದಿದೆ. ಸಾರ್ವಜನಿಕ ಘನತೆಯನ್ನು ಹಾಳು ಮಾಡಿದೆ. ಇಂದು ನನ್ನ ವಕೀಲರ ಮೂಲಕ 72 ಗಂಟೆಗಳ ಒಳಗೆ ಮಾಡಲಾದ ಎಲ್ಲಾ ಆರೋಪಗಳಿಗೆ ಪುರಾವೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಕಾನೂನು ನೋಟಿಸ್ ನೀಡಿದ್ದೇನೆ. ಸಾಕ್ಷ್ಯ ಒದಗಿಸದಿದ್ರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.

ಶುಕ್ರವಾರ ಐ-ಪ್ಯಾಕ್​ ಸಂಸ್ಥೆಯ ಕಚೇರಿ ಮೇಲಿನ ದಾಳಿ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಸಿಎಂ ಮಮತಾ ಬ್ಯಾನರ್ಜಿ, ಅಮಿತ್ ಶಾ ಮತ್ತು ಸುವೇಂದು ಅಧಿಕಾರಿ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಗರಣದ ಅಕ್ರಮ ಹಣ ಅಮಿತ್ ಶಾ ಅವರಿಗೂ ಹೋಗಿದೆ ಎಂದು ಆರೋಪಿಸಿದ್ದರು (ಏಜೆನ್ಸೀಸ್).