West Bengal Election | ಮುನ್ನಡೆ ಸಾಧಿಸುತ್ತಿದ್ದಂತೆ ಸುವೇಂದು ಅಧಿಕಾರಿ ಸ್ಫೋಟಕ ಹೇಳಿಕೆ! 
ದೇಶ

ದೀದಿಗೆ ಹಿಂದೂಗಳೇ ಪೆಟ್ಟು ನೀಡಿದ್ದಾರೆ..ಮುನ್ನಡೆ ಸಾಧಿಸುತ್ತಿದ್ದಂತೆ ಸುವೇಂದು ಅಧಿಕಾರಿ ಸ್ಫೋಟಕ ಹೇಳಿಕೆ! | West Bengal Election

West Bengal Election: ಪಶ್ಚಿಮ ಬಂಗಾಳದ ಮತ ಎಣಿಕೆ ಪ್ರಕ್ರಿಯೆಯು ಅತ್ಯಂತ ಕುತೂಹಲಕಾರಿ ತಿರುವು ಪಡೆದುಕೊಂಡಿದ್ದು, ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸುವೇಂದು ಅಧಿಕಾರಿ , ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹಿಂದೂ ಮತದಾರರು ಮತ ಚಲಾಯಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ತಮಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮಮತಾ ಬ್ಯಾನರ್ಜಿ ಈ ಬಾರಿ ಹೀನಾಯ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದ್ದಾರೆ. ಎಣಿಕೆಯ ಆರಂಭಿಕ ಸುತ್ತುಗಳಲ್ಲಿ ಸುವೇಂದು ಅಧಿಕಾರಿ, ದೀದಿ ವಿರುದ್ಧ ಮೇಲುಗೈ ಸಾಧಿಸಿದ್ದು, ಪ್ರತಿ ಸುತ್ತಿನಲ್ಲೂ ಈ ಸ್ಪರ್ಧೆಯು ಹೊಸ ತಿರುವುಗಳನ್ನು ಪಡೆಯುತ್ತಿದೆ. ಇಡೀ ದೇಶದ ಗಮನ ಸೆಳೆದಿರುವ ಈ ಹೈವೋಲ್ಟೇಜ್ ಕದನದಲ್ಲಿ ಮತ ಎಣಿಕೆ ಮುಂದುವರಿದಂತೆ ಫಲಿತಾಂಶದ ಚಿತ್ರಣವು ಮತ್ತಷ್ಟು ಸ್ಪಷ್ಟಗೊಳ್ಳುವ ನಿರೀಕ್ಷೆಯಿದೆ.

ಸಿಎಂ ರೇಸ್​ನಲ್ಲಿ ಆರು ಜನ!

ಸುವೇಂದು ಅಧಿಕಾರಿ: ವಿರೋಧ ಪಕ್ಷದ ನಾಯಕರಾಗಿ ಮಮತಾ ಬ್ಯಾನರ್ಜಿಗೆ ಪ್ರಬಲ ಸವಾಲೊಡ್ಡಿದ ಸುವೇಂದು ಅಧಿಕಾರಿ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ನಂದಿಗ್ರಾಮ ಮತ್ತು ಭವಾನಿಪುರ ಸ್ಪರ್ಧಿಸುತ್ತಿರುವ ಅಧಿಕಾರಿ, ಸಂಘಟನಾ ಚತುರತೆ ಮತ್ತು ಮಾಜಿ ಸಚಿವರಾಗಿ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.
ಸಮಿಕ್ ಭಟ್ಟಾಚಾರ್ಯ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸಮಿಕ್ ಭಟ್ಟಾಚಾರ್ಯ ಮತ್ತೊಬ್ಬ ಪ್ರಬಲ ಸ್ಪರ್ಧಿ. ಆರ್‌ಎಸ್‌ಎಸ್ ಹಿನ್ನೆಲೆಯ ಇವರು ಸಮಾಜದ ವಿವಿಧ ವರ್ಗಗಳನ್ನು ಪಕ್ಷದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೌಮ್ಯ ಸ್ವಭಾವದ ಮತ್ತು ಅನುಭವಿ ನಾಯಕರಾಗಿರುವ ಇವರು ಹೈಕಮಾಂಡ್‌ನ ನೆಚ್ಚಿನ ಆಯ್ಕೆಯಾಗುವ ಸಾಧ್ಯತೆಯಿದೆ.
ದಿಲೀಪ್ ಘೋಷ್: ಬಿಜೆಪಿಯ ತಳಮಟ್ಟದ ಸಂಘಟನೆಗೆ ಶಕ್ತಿ ತುಂಬಿದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅಪ್ಪಟ ಜನನಾಯಕ. 2019 ಮತ್ತು 2021ರ ಚುನಾವಣೆಗಳಲ್ಲಿ ಬಿಜೆಪಿಯ ಸಾಧನೆಗೆ ಬುನಾದಿ ಹಾಕಿದ್ದ ಇವರು, ಪ್ರಸ್ತುತ ಖರಗ್‌ಪುರ ಸದರ್ ಕ್ಷೇತ್ರದಿಂದ ಮುನ್ನಡೆ ಸಾಧಿಸುತ್ತಿದ್ದಾರೆ.
ನಿಶಿತ್ ಪ್ರಾಮಾಣಿಕ್: ಮಾಜಿ ಕೇಂದ್ರ ಸಚಿವರಾದ ನಿಶಿತ್ ಪ್ರಾಮಾಣಿಕ್ ಉತ್ತರ ಬಂಗಾಳದ ಪ್ರಭಾವಿ ನಾಯಕ. ಕೂಚ್ ಬೆಹಾರ್ ಭಾಗದಲ್ಲಿ ಪಕ್ಷವನ್ನು ಬಲಪಡಿಸಿದ ಇವರು ಮಠಭಂಗ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಯುವ ನಾಯಕತ್ವದ ಕೋಟಾದಡಿ ಇವರ ಹೆಸರು ಚರ್ಚೆಯಲ್ಲಿದೆ.
ಅಗ್ನಿಮಿತ್ರ ಪಾಲ್: ಅಸನ್ಸೋಲ್ ದಕ್ಷಿಣದ ಶಾಸಕಿ ಮತ್ತು ರಾಜ್ಯ ಉಪಾಧ್ಯಕ್ಷೆಯಾಗಿರುವ ಅಗ್ನಿಮಿತ್ರ ಪಾಲ್, ಪಕ್ಷದ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ನಾಯಕಿ. ಪ್ರಖರ ಭಾಷಣ ಮತ್ತು ಪಕ್ಷದ ಮೇಲಿನ ನಿಷ್ಠೆಯ ಕಾರಣದಿಂದಾಗಿ ಇವರ ಹೆಸರೂ ಕೂಡ ಪರಿಗಣನೆಯಲ್ಲಿದೆ.
ರೂಪಾ ಗಂಗೂಲಿ: ಮಾಜಿ ರಾಜ್ಯಸಭಾ ಸದಸ್ಯೆ ಮತ್ತು ಖ್ಯಾತ ನಟಿ ರೂಪಾ ಗಂಗೂಲಿ ನಗರ ಪ್ರದೇಶದ ಮತದಾರರಲ್ಲಿ ವರ್ಚಸ್ಸು ಹೊಂದಿದ್ದಾರೆ. ಸೋನಾರ್‌ಪುರ ದಕ್ಷಿಣದಿಂದ ಸ್ಪರ್ಧಿಸಿರುವ ಇವರು ಒಂದು ದಶಕದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಮಹಿಳಾ ನಾಯಕತ್ವದ ಹಿನ್ನೆಲೆಯಲ್ಲಿ ಇವರ ಹೆಸರು ಮುನ್ನೆಲೆಗೆ ಬಂದಿದೆ.
ಪ್ರಸ್ತುತ ಎಣಿಕೆ ಕೇಂದ್ರಗಳಿಂದ ಲಭ್ಯವಿರುವ ಮಾಹಿತಿ ಪ್ರಕಾರ, ಈ ಮೇಲಿನ ಎಲ್ಲಾ ಪ್ರಮುಖ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಂತಿಮ ಫಲಿತಾಂಶದ ಬಳಿಕ ಬಿಜೆಪಿ ಹೈಕಮಾಂಡ್ ನೂತನ ಮುಖ್ಯಮಂತ್ರಿಯನ್ನು ಅಧಿಕೃತವಾಗಿ ಘೋಷಿಸಲಿದೆ(ಏಜೆನ್ಸೀಸ್​).