Ram Navami Rally In Bhabanipur | ಭವಾನಿಪುರದಲ್ಲಿ ನಡೆದ ರಾಮನವಮಿ ಮೆರವಣಿಗೆಯಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ
Ram Navami Rally In Bhabanipur: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರಕೋಟೆಯೆಂದೇ ಪರಿಗಣಿಸಲಾದ ದಕ್ಷಿಣ ಕೋಲ್ಕತ್ತಾದ ಭವಾನಿಪುರದಲ್ಲಿ ಗುರುವಾರ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದೆ. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ನಡೆದ ರಾಮನವಮಿ ಮೆರವಣಿಗೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಸಮೀಪದಲ್ಲೇ ಸಾಗಿದ ಈ ಮೆರವಣಿಗೆಯು ಹಜ್ರಾ ಕ್ರಾಸಿಂಗ್‌ನಲ್ಲಿ ಅಂತ್ಯಗೊಂಡಿತು.
ಈ ಮೆರವಣಿಗೆಯಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ರಾಮನವಮಿಯು ಕೇವಲ ಧಾರ್ಮಿಕ ಹಬ್ಬವಲ್ಲ, ಅದು ಭಾರತದ ಸಾಂಸ್ಕೃತಿಕ ಗುರುತು ಎಂದು ಬಣ್ಣಿಸಿದರು. ಇಡೀ ಬಂಗಾಳ ಈಗ ರಾಮ ರಾಜ್ಯವನ್ನು ಬಯಸುತ್ತಿದ್ದು, ಅವರೆಲ್ಲರ ಆಸೆಯಂತೆ ಅದು ಸ್ಥಾಪನೆಯಾಗಲಿದೆ. ಜನರಿಗೆ ಉತ್ತಮ ಆಡಳಿತ, ಮಹಿಳಾ ಸುರಕ್ಷತೆ ಮತ್ತು ಯುವಕರಿಗೆ ಉದ್ಯೋಗ ಬೇಕಿದೆ. ಈ ಬಾರಿ ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಜನರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶ್..
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ರಾಜ್ಯದ ಜನತೆಗೆ ರಾಮನವಮಿಯ ಶುಭಾಶಯ ಕೋರಿದ್ದಾರೆ. ಹಬ್ಬವು ಶಾಂತಿಯುತವಾಗಿ ನಡೆಯಲಿ ಎಂದು ಆಶಿಸಿರುವ ಅವರು, ಎಲ್ಲರೂ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಯ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ಮನವಿ ಮಾಡಿದ್ದಾರೆ. ಕಳೆದ ವರ್ಷಗಳಲ್ಲಿ ರಾಮನವಮಿ ಸಂದರ್ಭದಲ್ಲಿ ಅಶಾಂತಿ ಉಂಟಾಗಿದ್ದ ಹೌರಾ ಮತ್ತು ಹೂಗ್ಲಿ ಜಿಲ್ಲೆಗಳ ಮೇಲೆ ಪೊಲೀಸ್ ಇಲಾಖೆ ವಿಶೇಷ ನಿಗಾ ಇಟ್ಟಿದ್ದು, ರಾಜ್ಯಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಭವಾನಿಪುರ ಕ್ಷೇತ್ರವು ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿದ್ದು, 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದ ಮಮತಾ ಬ್ಯಾನರ್ಜಿ, ನಂತರ ಭವಾನಿಪುರ ಉಪಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಂಡಿದ್ದರು. ಇದೀಗ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ತ್ರಗಳನ್ನು ಬಳಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರೆ, ತೃಣಮೂಲ ಕಾಂಗ್ರೆಸ್ ತನ್ನ 15 ವರ್ಷದ ಅಭಿವೃದ್ಧಿ ಯೋಜನೆಗಳನ್ನು ನೆಚ್ಚಿಕೊಂಡಿದೆ(ಏಜೆನ್ಸೀಸ್).