Suvendu Adhikari | ಕಾಳಿಘಾಟ್ ದೇವಸ್ಥಾನದಲ್ಲಿ ಮೀನು ತಿಂದ ಸಿಎಂ ಸುವೇಂದು ಅಧಿಕಾರಿ! 
ದೇಶ

ದುರ್ಗಾಪೂಜೆಯಲ್ಲಿ ಮಾಂಸಾಹಾರ ಸೇವನೆ ವಿವಾದದ ನಡುವೆ ಕಾಳಿಘಾಟ್ ದೇವಸ್ಥಾನದಲ್ಲಿ ಮೀನು ತಿಂದ ಸಿಎಂ ಸುವೇಂದು ಅಧಿಕಾರಿ! | Suvendu Adhikari

ಕೋಲ್ಕತ್ತಾ: ದೇಶದ ಇತರ ಭಾಗಗಳಲ್ಲಿ ದೇವಸ್ಥಾನಗಳಲ್ಲಿ ಮಾಂಸಾಹಾರ ಸೇವನೆಯು ಧಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗುತ್ತದೆ. ಆದರೆ ಪಶ್ಚಿಮ ಬಂಗಾಳದ ಕೆಲವು ದೇವಸ್ಥಾನಗಳಲ್ಲಿ ಇದು ನಿತ್ಯದ ಸಾಮಾನ್ಯ ಆಚರಣೆಯಾಗಿದೆ. ದೇವರಿಗೆ ಮೀನು ಮತ್ತು ಬಲಿ ನೀಡಿದ ಮೇಕೆ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸುವುದು ಇಲ್ಲಿನ ಪುರಾತನ ಪರಂಪರೆಯಾಗಿದೆ.
ಇತ್ತೀಚೆಗೆ ಶಕ್ತ ಆರಾಧಕರಿಗೆ ಅತ್ಯಂತ ಪವಿತ್ರವಾದ ಕೌಶಿಕಿ ಅಮಾವಾಸ್ಯೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರು ಕೋಲ್ಕತ್ತಾದ ಐತಿಹಾಸಿಕ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ದೇವಸ್ಥಾನದ ನೆಲದ ಮೇಲೆ ಕುಳಿತು ದೇವರಿಗೆ ಅರ್ಪಿಸಲಾಗಿದ್ದ ಕಾಳಿಘಾಟ್‌ನ ಸಾಂಪ್ರದಾಯಿಕ ಮೀನಿನ ತಲೆಯ ಭೋಗ್, ಹುರಿದ ಮೀನು ಮತ್ತು ಬಾಸಂತಿ ಪುಲಾವ್ ಪ್ರಸಾದವನ್ನು ಸ್ವೀಕರಿಸಿದರು.
ಮಾಂಸಾಹಾರ ಸೇವಿಸುವ ಹಿಂದೂಗಳನ್ನು ಪರಮ ವಂಚಕರು ಎಂದ ಬಾಬಾ
ಈ ಘಟನೆಯು ಇತ್ತೀಚೆಗೆ ಕೋಲ್ಕತ್ತಾದಲ್ಲಿ ಭುಗಿಲೆದ್ದಿದ್ದ ಆಹಾರ ಪದ್ಧತಿಯ ವಿವಾದಕ್ಕೆ ಹೊಸ ತಿರುವು ನೀಡಿದ್ದು, ಬಾಗೇಶ್ವರ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಶಾಸ್ತ್ರಿ ಅಲಿಯಾಸ್ ಬಾಗೇಶ್ವರ ಬಾಬಾ ಅವರು ದುರ್ಗಾಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವ ಬಂಗಾಳಿ ಹಿಂದೂಗಳನ್ನು ಪಾಖಂಡಿಗಳು (ಪರಮ ವಂಚಕರು) ಎಂದು ಕರೆದಿದ್ದರು. ಅಲ್ಲದೆ, ದುರ್ಗಾಪೂಜೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಹೇಳಿಕೆಯು ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವ ಮತ್ತು ದೇವರಿಗೇ ನೈವೇದ್ಯವಾಗಿ ಅರ್ಪಿಸುವ ಬಂಗಾಳಿ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿವಾದದ ನಡುವೆ ಬಿಜೆಪಿ ನಾಯಕರು ಸಾರ್ವಜನಿಕ ಆಚರಣೆ ಮತ್ತು ಧಾರ್ಮಿಕ ಭಾವನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ಮಾತನಾಡಿ, ಬಾಗೇಶ್ವರ ಬಾಬಾಗೆ ಬಂಗಾಳದ ಜನರ ಆಹಾರ ಪದ್ಧತಿಯನ್ನು ನಿರ್ಧರಿಸುವ ಹಕ್ಕಿಲ್ಲ ಹಾಗೂ ಸ್ವಾಮಿ ವಿವೇಕಾನಂದರು ಕೂಡ ಬಂಗಾಳಿಗಳು ಮೀನು-ಮಾಂಸ ಸೇವಿಸುವುದನ್ನು ಬೆಂಬಲಿಸಿದ್ದರು ಎಂದು ಸ್ಪಷ್ಟಪಡಿಸಿದರು.
ಇತ್ತ ಸುವೇಂಧು ಅಧಿಕಾರಿ ಅವರು ಬಾಗೇಶ್ವರ ಬಾಬಾ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಲೇ, ಸ್ವತಃ ಕಾಳಿಘಾಟ್ ದೇವಸ್ಥಾನಕ್ಕೆ ತೆರಳಿ ಮೀನಿನ ಪ್ರಸಾದ ಸ್ವೀಕರಿಸುವ ಮೂಲಕ ಸೂಕ್ತ ಉತ್ತರ ನೀಡಿದರು. ಈ ಕುರಿತು ಮಾತನಾಡಿದ ಅವರು, ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅದನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಜನರಿಗೆ ಬಿಟ್ಟದ್ದು ಎಂದರು. ತಾವು ಮಹಾಷ್ಟಮಿ ಮತ್ತು ಕಾರ್ತಿಕ ಮಾಸದಲ್ಲಿ ಸಾತ್ವಿಕ ಆಹಾರ ಸೇವಿಸುವುದಾಗಿಯೂ, ಅದೇ ಸಮಯದಲ್ಲಿ ಕಾಳಿ ದೇವಿಗೆ ಅರ್ಪಿಸುವ ಮೇಕೆ ಮಾಂಸ ಮತ್ತು ಮೀನಿನ ಭೋಗ್ ಪ್ರಸಾದವನ್ನು ಪವಿತ್ರವಾಗಿ ಸ್ವೀಕರಿಸುವುದಾಗಿಯೂ ಸ್ಪಷ್ಟಪಡಿಸಿದರು.

ವಿವಾದಕ್ಕೆ ಅಂತ್ಯ ಹಾಡಿ ಎಂದ ಬಿಜೆಪಿ ವಕ್ತಾರ!

ಪಶ್ಚಿಮ ಬಂಗಾಳದಲ್ಲಿ ಮೀನು ದೈನಂದಿನ ಆಹಾರದ ಮುಖ್ಯ ಭಾಗವಾಗಿದೆ. ಪೂರ್ವ ಭಾರತದಲ್ಲಿ ಆಚರಿಸಲಾಗುವ ಶಕ್ತ ಪರಂಪರೆಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಹಾರ ಪದ್ಧತಿಯು ಬೆಸೆದುಕೊಂಡಿದೆ. ದುರ್ಗಾಪೂಜೆಯು ಬಂಗಾಳದ ಅತಿ ದೊಡ್ಡ ಹಬ್ಬವಾಗಿದ್ದು, ಇಲ್ಲಿ ನೈವೇದ್ಯವಾಗಿ ಮಾಂಸಾಹಾರವನ್ನು ಸಂಭ್ರಮದಿಂದಲೇ ನೀಡಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಇಂತಹ ಆಚರಣೆಗಳು ವಿರಳವಾಗಿರುವುದರಿಂದ, ಈ ಆಹಾರ ಪದ್ಧತಿಯು ಆಗಾಗ್ಗೆ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗುತ್ತದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಈ ಕುರಿತು ಪ್ರತಿಕ್ರಿಯಿಸಿ, ಕಾಳಿಘಾಟ್‌ನಲ್ಲಿ ಕಾಳಿ ಮಾತೆಯ ಸಾಂಪ್ರದಾಯಿಕ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಬಂಗಾಳದ ನಂಬಿಕೆ, ಸಂಸ್ಕೃತಿ ಮತ್ತು ಜೀವನ ಪದ್ಧತಿಯನ್ನು ಗೌರವಿಸಲಾಗಿದೆ. ಈ ಮೂಲಕ ಅನಗತ್ಯವಾಗಿ ಸೃಷ್ಟಿಯಾಗಿದ್ದ ಸಸ್ಯಾಹಾರ ಮತ್ತು ಮಾಂಸಾಹಾರದ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಹೇಳಿದ್ದಾರೆ(ಏಜೆನ್ಸೀಸ್​).