Aminul Islam | ಮಂಕಚಾರ್ ಶಾಸಕ ಅಮೀನುಲ್ ಇಸ್ಲಾಂ
ದಿಸ್ಪೂರ್: ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿರುವಾಗಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಂಕಚಾರ್ ಶಾಸಕ ಅಮೀನುಲ್ ಇಸ್ಲಾಂ (Aminul Islam) ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಎಐಯುಡಿಎಫ್‌ನಲ್ಲಿ ಎರಡನೇ ಪ್ರಭಾವಿ ನಾಯಕರಾಗಿದ್ದ ಇಸ್ಲಾಂ, ಹಿರಿಯ ಕಾಂಗ್ರೆಸ್ ನಾಯಕ ಜಿತೇಂದ್ರ ಸಿಂಗ್ ಸಮ್ಮುಖದಲ್ಲಿ ಕೈ ಹಿಡಿದಿದ್ದು, ಈ ಹಿಂದೆ ಎಐಯುಡಿಎಫ್‌ಗೆ ರಾಜೀನಾಮೆ ನೀಡಿದ ಬಳಿಕ ಅವರು ಅಸೋಮ್ ಗಣ ಪರಿಷತ್ (AGP) ಸೇರಲು ಯತ್ನಿಸಿದ್ದರು. ಆದರೆ ಎಜಿಪಿ ಅವರಿಗೆ ಚುನಾವಣಾ ಟಿಕೆಟ್ ನೀಡಲು ನಿರಾಕರಿಸಿದ ಕಾರಣ, ಈಗ ಕಾಂಗ್ರೆಸ್ ಸೇರುವ ನಿರ್ಧಾರ ಕೈಗೊಂಡಿದ್ದಾರೆ.
ತಮ್ಮ ಈ ಹೊಸ ಪಯಣದ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಸ್ಲಾಂ, ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಮತ್ತು ಭೂಪೇಶ್ ಬಾಘೇಲ್ ಅವರೊಂದಿಗಿನ ಚರ್ಚೆಗಳು ಅತ್ಯಂತ ಫಲಪ್ರದವಾಗಿದ್ದು, ಮಂಕಚಾರ್ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಮಾರ್ಚ್ ಆರಂಭದಲ್ಲಿ ಅಮೀನುಲ್ ಇಸ್ಲಾಂರನ್ನು ಎಐಯುಡಿಎಫ್ ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು. ಅವರ ವಿವಾದಾತ್ಮಕ ನಡೆಗಳು ಪಕ್ಷದ ಹಿತಾಸಕ್ತಿಗೆ ಹಾನಿಕಾರಕ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಫೀಜ್ ಬಶೀರ್ ಅಹ್ಮದ್ ಆದೇಶ ಹೊರಡಿಸಿದ್ದರು.
ಈ ಬಾರಿ ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿದ್ದರೆ, ಅಮೀನುಲ್ ಇಸ್ಲಾಂ ಅಂತಹ ನಾಯಕರ ಸೇರ್ಪಡೆಯಿಂದ ಕಾಂಗ್ರೆಸ್ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಆಯೋಗ ಘೋಷಿಸಿದೆ(ಏಜೆನ್ಸೀಸ್).