ಶಹಜಹಾನ್‌ಪುರ (ಯುಪಿ): ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದ ಮೇಲೆ 25 ವರ್ಷದ ಯುವಕನೊಬ್ಬ 17 ವರ್ಷದ ಬಾಲಕನನ್ನು ಮರದ ಕೋಲಿನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.
ಈ ಸಂಬಂಧ ಆರೋಪಿ ಅನೀಸ್ ಎಂಬಾತನನ್ನು ಪೊಲೀಸರು ಇಂದು (ಫೆಬ್ರವರಿ 1) ಬಂಧಿಸಿದ್ದಾರೆ. ಮೃತ ಬಾಲಕನನ್ನು ಕಮಲೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಶನಿವಾರ ಮುಂಜಾನೆ ರಾವತ್‌ಪುರ ಗ್ರಾಮದ ಪಂಚಾಯತ್ ಕಟ್ಟಡದ ಬಳಿ ಕಮಲೇಶ್‌ನ ಶವ ಪತ್ತೆಯಾಗಿತ್ತು. ತಲೆಗೆ ತೀವ್ರವಾದ ಪೆಟ್ಟು ಬಿದ್ದಿರುವುದು ಸಾವಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹತ್ಯೆಗೆ ಕಾರಣವಾದ ವಾಟ್ಸಾಪ್ ಸಂದೇಶಗಳು!
ಪೊಲೀಸ್ ವರಿಷ್ಠಾಧಿಕಾರಿ (SP) ರಾಜೇಶ್ ದ್ವಿವೇದಿ ಅವರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಅನೀಸ್ ತನ್ನ 22 ವರ್ಷದ ಪತ್ನಿ ಮತ್ತು ಕಮಲೇಶ್ ನಡುವಿನ ವಾಟ್ಸಾಪ್ ಮೆಸೇಜ್‌ಗಳು ಹಾಗೂ ಫೋನ್ ಕರೆಗಳನ್ನು ನೋಡಿದ್ದನು. ಇದರಿಂದ ತೀವ್ರವಾಗಿ ಆಕ್ರೋಶಗೊಂಡಿದ್ದ ಅನೀಸ್, ಬಾಲಕನನ್ನು ಕೊಲ್ಲಲು ಸಂಚು ರೂಪಿಸಿದ್ದನು.
ಶುಕ್ರವಾರ ರಾತ್ರಿ ಅನೀಸ್ ಬಾಲಕನ ಮನೆಗೆ ಹೋಗಿ ಆತನನ್ನು ಹೊರಗೆ ಕರೆದುಕೊಂಡು ಹೋಗಿದ್ದನು. ಆ ಸಮಯದಲ್ಲಿ ಕಮಲೇಶ್‌ನ ಸಹೋದರಿ ಇವರಿಬ್ಬರೂ ಒಟ್ಟಿಗೆ ಹೋಗುತ್ತಿರುವುದನ್ನು ಗಮನಿಸಿದ್ದಳು. ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಬಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಆರೋಪಿಯ ತಪ್ಪೊಪ್ಪಿಗೆ
ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅನೀಸ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. "ಕೋಲಿನಿಂದ ಬಾಲಕನ ತಲೆಗೆ ಹಲವು ಬಾರಿ ಹೊಡೆದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ" ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಪೋಲಿಸರು ಹತ್ಯೆಗೆ ಬಳಸಿದ ಮರದ ಕೋಲನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಿಸಿದ್ದು, ಅಪ್ರಾಪ್ತ ಬಾಲಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ,(ಏಜೆನ್ಸೀಸ್).