ಪತ್ನಿ ಕೊಲೆ ಮಾಡಿ ಆರೋಪಿ ಸೆಲ್ಫಿ ತೆಗೆದುಕೊಂಡಿರುವುದು 
ದೇಶ

ಅಕ್ರಮ ಸಂಬಂಧ ಶಂಕೆ; ಪಿಜಿಗೆ ನುಗ್ಗಿ ಪತ್ನಿಯನ್ನು ಕೊಂದು ಶವ ಜೊತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ ಆರೋಪಿ ಪತಿ | Wife murder

ಚೆನ್ನೈ: ತಮಿಳುನಾಡಿನ ತಿರುನ್ವೇಲಿಯಲ್ಲಿ ಅಕ್ರಮ ಸಂಬಂಧದ ಶಂಕೆ ಮೇಲೆ ಪತಿಯೊಬ್ಬ ಪತ್ನಿ ಕೊಲೆಗೈದು(Wife murder), ಶವದ ಜೊತೆಗೆ ಸೆಲ್ಫಿ ತೆಗೆದುಕೊಂಡು ವಾಟ್ಸಾಪ್​ ಸ್ಟೇಟಸ್ ಹಾಕಿಕೊಂಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಸೋಮವಾರ(ಡಿ. 01) ವರದಿಯಾಗಿದೆ.
ಶ್ರೀಪ್ರಿಯಾ ಕೊಲೆಯಾದ ಪತ್ನಿ, ಕೊಯಮತ್ತೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು ಎನ್ನಲಾಗಿದೆ. ಬಾಲಮುರುಗನ್, ಕೊಲೆ ಮಾಡಿದ ಆರೋಪಿ ಪತಿ. ಕೌಟುಂಬಿಕ ಕಲಹದಿಂದ ಕೆಲವು ದಿನಗಳಿಂದ ಶ್ರೀಪ್ರಿಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ ಪತಿ ಬಾಲಮುರಗನ್ ಆಕೆಯನ್ನು ಭೇಟಿಯಾಗುವ ನೆಪದಲ್ಲಿ ಬಟ್ಟೆಯೊಳಗೆ ಚಾಕು ತೆಗೆದುಕೊಂಡು ಪಿಜಿಗೆ ಬಂದಿದ್ದಾನೆ. ಈ ವೇಳೆ ಮಾತನಾಡುವ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾದಾಗ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಈ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸರು, ಆರೋಪಿ ಪತಿ ಭೇಟಿಯಾದ ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹಠಾತ್ ದಾಳಿಯಲ್ಲಿ, ಬಾಲಮುರುಗನ್ ಚಾಕು ಹೊರತೆಗೆದು ಹಾಸ್ಟೆಲ್‌ನಲ್ಲಿ ಆಕೆಯನ್ನು ಇರಿದು ಕೊಂದಿದ್ದಾನೆ. ಬಳಿಕ ಅವನು ಆಕೆಯ ದೇಹದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಅಪ್‌ಲೋಡ್ ಮಾಡಿ, ಆಕೆ ತನಗೆ "ದ್ರೋಹ" ಮಾಡಿದ್ದಾಳೆಂದು ಬರೆದುಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ದಾಳಿ ನಡೆಯುತ್ತಿದ್ದಂತೆ ಪಿಜಿಯಲ್ಲಿದ್ದವರು ಭಯಭೀತರಾಗಿ ಹೊರಗೆ ಓಡಿಹೋದರು. ಆದಾಗ್ಯೂ, ಬಾಲಮುರುಗನ್ ಸ್ಥಳದಲ್ಲೇ ಇದ್ದು ಪೊಲೀಸರು ಬರುವವರೆಗೂ ಕಾದಿದ್ದಾನೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧವಿದೆ ಎಂಬ ಶಂಕೆ ಮೇಲೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ (ಏಜೆನ್ಸೀಸ್).