Sushmita Dev (ಚಿತ್ರ X) 
ದೇಶ

ರಾಜಕೀಯದಲ್ಲಿ ಎಲ್ಲವನ್ನೂ ಹೇಳಲಾಗಲ್ಲ!...ಟಿಎಂಸಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮೌನ ಮುರಿದ ಸುಶ್ಮಿತಾ ದೇವ್ Sushmita Dev

ಪ್ರಮುಖ ಮುಖ್ಯಾಂಶಗಳು

  • ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ
  • ನನಗೆ ಇನ್ನು ಮುಂದೆ ಎರಡು ದೋಣಿಗಳ ಮೇಲೆ ಕಾಲಿಟ್ಟು ಸಾಗಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ಮೌನ ಮುರಿದಿದ್ದಾರೆ
  • ರಾಜ್ಯಸಭೆಗೆ ಮಾತ್ರವಲ್ಲದೆ ತೃಣಮೂಲ ಕಾಂಗ್ರೆಸ್‌ನಿಂದಲೂ ತಾವು ರಾಜೀನಾಮೆ ನೀಡಿರುವುದಾಗಿ ಸ್ಪಷ್ಟಪಡಿಸಿದ ಸುಷ್ಮಿತಾ
Sushmita Dev: ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಸುಸ್ಮಿತಾ ದೇವ್, ಕೊನೆಗೂ ತಮ್ಮ ಮೌನ ಮುರಿದಿದ್ದು, ನನಗೆ ಇನ್ನು ಮುಂದೆ ಎರಡು ದೋಣಿಗಳ ಮೇಲೆ ಕಾಲಿಟ್ಟು ಸಾಗಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ತಮ್ಮ ನಿರ್ಧಾರದ ಹಿಂದಿನ ಅಸಲಿ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ರಾಜೀನಾಮೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಅವರು, ಇದು ತಮ್ಮ ವೈಯಕ್ತಿಕ ಹಾಗೂ ರಾಜಕೀಯ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರಾದರೂ, ಪಕ್ಷದಿಂದ ಹೊರಬರಲು ಕಾರಣವಾದ ಆಂತರಿಕ ರಹಸ್ಯಗಳನ್ನು ಬಹಿರಂಗಪಡಿಸಲು ಸದ್ಯಕ್ಕೆ ನಿರಾಕರಿಸಿದ್ದಾರೆ.

ಟಿಎಂಸಿಗೂ ರಾಜೀನಾಮೆ: ಸುಷ್ಮಿತಾ ದೇವ್

ರಾಜ್ಯಸಭೆಗೆ ಮಾತ್ರವಲ್ಲದೆ ತೃಣಮೂಲ ಕಾಂಗ್ರೆಸ್‌ನಿಂದಲೂ ತಾವು ರಾಜೀನಾಮೆ ನೀಡಿರುವುದಾಗಿ ಸ್ಪಷ್ಟಪಡಿಸಿದ ಸುಷ್ಮಿತಾ, ನಾನು ರಾಜ್ಯಸಭೆಗೆ ಮಾತ್ರವಲ್ಲದೆ ತೃಣಮೂಲ ಕಾಂಗ್ರೆಸ್​ಗೂ ರಾಜೀನಾಮೆ ನೀಡಿದ್ದೇನೆ, ಮತ್ತು ಆ ಪರಿಸ್ಥಿತಿಯಲ್ಲಿ ಮಾಡಬೇಕಾದ ಅತ್ಯಂತ ಪ್ರಮುಖ ಹಾಗೂ ತಾರ್ಕಿಕ ಕೆಲಸ ಅದೇ ಆಗಿತ್ತು ಎಂದು ಹೇಳಿದ್ದಾರೆ. 

ಸಿಎಂ ಹಿಮಂತ ಬಿಸ್ವ ಶರ್ಮಾರನ್ನು ಭೇಟಿ ಮಾಡಿದ ದೇವ್​ 

ಹಿಂದೆ ಅಸ್ಸಾಂನ ಸಿಲ್ಚಾರ್ ಕ್ಷೇತ್ರದಿಂದ ಕಾಂಗ್ರೆಸ್‌ನ ಲೋಕಸಭಾ ಸಂಸದರಾಗಿದ್ದ ಸುಸ್ಮಿತಾ ದೇವ್ ಅವರು, 2019 ರ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್ ತೊರೆದು 2021 ರಲ್ಲಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಟಿಎಂಸಿಯಲ್ಲಿ ಅತ್ಯಂತ ವೇಗವಾಗಿ ಬೆಳೆದ ಅವರು ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದಲ್ಲದೆ, ರಾಜ್ಯಸಭಾ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ರಾಜ್ಯಸಭೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರು ದೆಹಲಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾಗಿರುವುದು ಭಾರಿ ಕುತೂಹಲ ಮೂಡಿಸಿದೆ. ಈ ದಿಢೀರ್ ಬೆಳವಣಿಗೆಯ ಬೆನ್ನಲ್ಲೇ, ಸುಶ್ಮಿತಾ ದೇವ್ ಅವರು ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಸಿಎಂ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾದ ಕುರಿತು ಮಾತನಾಡಿದ ದೇವ್​, ನಾನಿಂದು ಸ್ವತಂತ್ರ ಮಹಿಳೆ. ನನಗೆ ಹಿಮಂತ ದಾದಾ ಅವರು ತುಂಬಾ ದಿನಗಳಿಂದ ಪರಿಚಯವಿದ್ದ ಹಿನ್ನೆಲೆಯಲ್ಲಿ, ನಾನು ಅವರನ್ನು ಕೇವಲ ಸೌಜನ್ಯಕ್ಕಾಗಿ ಭೇಟಿಯಾಗಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್‌ನೊಳಗಿನ ಆಂತರಿಕ ಬೆಳವಣಿಗೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ನಾನು ನೇರವಾಗಿ ಭಾಗಿಯಾಗಿಲ್ಲ ಹಾಗಾಗಿ ಪಕ್ಷದ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು (ಏಜೆನ್ಸೀಸ್​).