ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖಾಧಿಕಾರಿ ನೂಪುರ್ ಪ್ರಸಾದ್ ಅವರಿಗೆ ರಾಷ್ಟ್ರಪತಿ ಪದಕ  
ದೇಶ

ಸುಶಾಂತ್ ಕೇಸ್ ತನಿಖಾಧಿಕಾರಿಗೆ ರಾಷ್ಟ್ರಪತಿ ಗೌರವ! IPS ನೂಪುರ್ ಪ್ರಸಾದ್‌ಗೆ ಪ್ರತಿಷ್ಠಿತ ಪದಕ |Nupur Prasad Gets President’s Medal

ಪ್ರಮುಖ ಮುಖ್ಯಾಂಶಗಳು

  • ಸುಶಾಂತ್ ಕೇಸ್ ತನಿಖಾಧಿಕಾರಿಗೆ ರಾಷ್ಟ್ರಪತಿ ಗೌರವ
  • ಸಿಬಿಐ ತನಿಖೆಯಲ್ಲಿ ನೂಪುರ್ ಪ್ರಸಾದ್ ಪ್ರಮುಖ ಪಾತ್ರ
  • ಮಹಿಳಾ ಸುರಕ್ಷತೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಕೊಡುಗೆ
ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಿಬಿಐ ತನಿಖೆಯ ನೇತೃತ್ವ ವಹಿಸಿದ್ದ ಐಪಿಎಸ್ ಅಧಿಕಾರಿ ನೂಪುರ್ ಪ್ರಸಾದ್ ಅವರಿಗೆ ಈ ವರ್ಷದ ಮೆರಿಟೋರಿಯಸ್ ಸರ್ವಿಸ್ (MSM) ಪದಕ ನೀಡಿ ಸನ್ಮಾನಿಲಾಗಿದೆ.
ಇನ್ನು, 2007ರ ಎಜಿಎಂಯುಟಿ ಕೇಡರ್‌ನ ಅಧಿಕಾರಿಯಾಗಿರುವ ನೂಪುರ್ ಪ್ರಸಾದ್, ಸಿಬಿಐನಲ್ಲಿ ತಮ್ಮ ಸೇವಾವಧಿ ಪೂರ್ಣಗೊಳಿಸಿದ ಬಳಿಕ ದೆಹಲಿಗೆ ಮರಳಿದ್ದಾರೆ. ಸದ್ಯ ಅವರು ಆರ್ಥಿಕ ಅಪರಾಧಗಳ ವಿಭಾಗದ (EOW) ಜಂಟಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ತನಿಖೆ, ಅಪರಾಧ ತಡೆ, ಸಾರ್ವಜನಿಕ ಸೇವೆ, ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಅವರಿಗೆ ಈ ಗೌರವ ಸಲ್ಲಿಸಲಾಗಿದೆ.

ಸುಶಾಂತ್ ಪ್ರಕರಣದಲ್ಲಿ ಪ್ರಮುಖ ಪಾತ್ರ

2020ರ ಜೂನ್ 14ರಂದು ಮುಂಬೈನ ಅವರ ಮನೆಯಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ಬಳಿಕ ಈ ಕೇಸ್​ನ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯ ವೇಳೆ ನೂಪುರ್ ಪ್ರಸಾದ್ ಅವರು ಸಾಕ್ಷಿಗಳು, ವಿಧಿವಿಜ್ಞಾನ ಹಾಗೂ ವೈದ್ಯಕೀಯ ದಾಖಲೆಗಳ ಪರಿಶೀಲನೆಯಂತಹ ಪ್ರಮುಖ ಅಂಶಗಳನ್ನು ಮೇಲ್ವಿಚಾರಣೆ ಮಾಡಿದ್ದರು. 2025ರಲ್ಲಿ ಸಿಬಿಐ ಸಲ್ಲಿಸಿದ ಫೈನಲ್​ ವರದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ದುಷ್ಕೃತ್ಯ, ಆತ್ಮಹತ್ಯೆಗೆ ಪ್ರಚೋದನೆ ಅಥವಾ ಕ್ರಿಮಿನಲ್ ಪಿತೂರಿಯ ಬಗ್ಗೆ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ ಎಂದು ತಿಳಿಸಿತ್ತು.

ಪೊಲೀಸ್​ ​ಹುದ್ದೆಗಳಲ್ಲಿ

ಸಿಬಿಐಗೆ ಸೇರುವ ಮುನ್ನ ನೂಪುರ್ ಪ್ರಸಾದ್ ಹಲವು ಪ್ರಮುಖ ಪೊಲೀಸ್ ​ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಶಹದಾರಾದ ಮೊದಲ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಮಹಿಳಾ ಸ್ವರಕ್ಷಣೆ, ಯುವ ಅಭಿವೃದ್ಧಿ, ಸೈಬರ್ ಸುರಕ್ಷತೆ ಹಾಗೂ ಮಾದಕ ವ್ಯಸನ ನಿರ್ಮೂಲನೆ ಸೇರಿದಂತೆ ಹಲವು ಸಮುದಾಯ ಆಧಾರಿತ ಪೊಲೀಸ್ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ,(ಏಜೆನ್ನೀಸ್​).