Solar eclipse (ಸಾಂದರ್ಭಿಕ ಚಿತ್ರ)
- ಆಕಾಶ ವೀಕ್ಷಕರಿಗೆ ಹಬ್ಬ: ನಾಳೆ ಸಂಭವಿಸಲಿದೆ ವಾರ್ಷಿಕ ಸೂರ್ಯಗ್ರಹಣ!
- 2026 ರ ಮೊದಲ ಸೂರ್ಯಗ್ರಹಣ; ಭಾರತದ ಮೇಲೆ ಇದರ ಪ್ರಭಾವ ಎಷ್ಟಿದೆ?
- ಸೂರ್ಯ ಗ್ರಹಣವು 'ವಾರ್ಷಿಕ ಸೂರ್ಯಗ್ರಹಣ'ವಾಗಿದ್ದು, ಚಂದ್ರನು ಸೂರ್ಯನ ಮಧ್ಯಭಾಗವನ್ನು ಮಾತ್ರ ಆವರಿಸುತ್ತಾನೆ
- ಸೂರ್ಯನ ಅಂಚುಗಳು ಪ್ರಕಾಶಮಾನವಾದ ಉಂಗುರದಂತೆ ಕಂಗೊಳಿಸುತ್ತವೆ
Solar eclipse:ಖಗೋಳಶಾಸ್ತ್ರಜ್ಞರು ಮತ್ತು ಆಕಾಶ ವೀಕ್ಷಕರು ಕಾತುರದಿಂದ ಕಾಯುತ್ತಿರುವ ವರ್ಷದ ಮೊದಲ ಅದ್ಭುತ ಖಗೋಳ ವಿದ್ಯಮಾನವೊಂದು ಸಂಭವಿಸಲು ಕ್ಷಣಗಣನೆ ಆರಂಭವಾಗಿದ್ದು, ನಾಳೆ ಅಂದರೆ, ಫೆ(17) ರಂದು ಮೊದಲ ಸೂರ್ಯಗ್ರಹಣ ಜರುಗಲಿದೆ. ಈ ಗ್ರಹಣವು ಯಾವಾಗಲೂ ಅಮಾವಾಸ್ಯೆ ದಿನದಂದೇ ಸಂಭವಿಸುವುದರಿಂದ ಈ ಬಾರಿಯೂ ಈ ಘಟನೆ ಸಂಭವಿಸಲಿದೆ.
ನಭದಲ್ಲಿ ಕಾಣಲಿದೆ 'ಬೆಂಕಿಯ ಉಂಗುರ'
ಈ ಸೂರ್ಯ ಗ್ರಹಣವು 'ವಾರ್ಷಿಕ ಸೂರ್ಯಗ್ರಹಣ'ವಾಗಿದ್ದು, ಚಂದ್ರನು ಸೂರ್ಯನ ಮಧ್ಯಭಾಗವನ್ನು ಮಾತ್ರ ಆವರಿಸುತ್ತಾನೆ. ಈ ವೇಳೆ ಸೂರ್ಯನ ಅಂಚುಗಳು ಪ್ರಕಾಶಮಾನವಾದ ಉಂಗುರದಂತೆ ಕಂಗೊಳಿಸಿ, ಸೂರ್ಯ ಗ್ರಹಣವನ್ನು ಸೃಷ್ಟಿಸುತ್ತದೆ. ಕೆಲವೊಮ್ಮೆ ಇದನ್ನು ಬೆಂಕಿಯ ಉಂಗುರ ಅಥವಾ ಸೂರ್ಯನ ಉಂಗುರ ಎಂದು ಕರೆಯಲಾಗುತ್ತದೆ.
ಸೂರ್ಯಗ್ರಹಣದ ಸಮಯ
ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಮಧ್ಯಾಹ್ನ 3:26ಕ್ಕೆ ಪ್ರಾರಂಭವಾಗಿ ಸುಮಾರು ಸಂಜೆ 7:57 ರವರೆಗೆ ಇರುತ್ತದೆ. ಇದರ ಒಟ್ಟು ಅವಧಿ ಸುಮಾರು 4 ಗಂಟೆ 30 ನಿಮಿಷಗಳಾಗಿರುತ್ತದೆ. ಆದಾಗ್ಯೂ, ಇದರ ಗೋಚರತೆಯು ವಿವಿಧ ದೇಶಗಳಲ್ಲಿ ಬದಲಾಗಬಹುದು ಎಂದು ಜ್ಯೋತಿಷ್ಯ ತಿಳಿಸಿದೆ.
ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆಯೇ?
ಈ ಸೂರ್ಯ ಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ. ಬದಲಾಗಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೋಟ್ಸ್ವಾನಾ, ನಮೀಬಿಯಾ, ಮಾರಿಷಸ್, ತಾಂಜಾನಿಯಾ, ಅರ್ಜೆಂಟೀನಾ, ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಕಾಣಿಸುತ್ತದೆ.
ಸೂತಕ ಅವಧಿಯ ನಿಯಮಗಳೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣ ಯಾವ ಪ್ರದೇಶದಲ್ಲಿ ಗೋಚರಿಸುತ್ತದೆಯೋ, ಅಲ್ಲಿ ಮಾತ್ರ ಸೂತಕವನ್ನು ಆಚರಿಸಲಾಗುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ ಈ ದೇಶಕ್ಕೆ ಯಾವುದೇ ಸೂತಕ ಆವರಿಸಿಕೊಳ್ಳುವುದಿಲ್ಲ. ಹಾಗಾಗಿ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು ಜೊತೆಗೆ ಆಚರಣೆಗಳನ್ನು ಕೂಡಾ ಮಾಡಬಹುದು.
ರಾಶಿಚಕ್ರ ಚಿಹ್ನೆಗಳ ಪ್ರಕಾರ ಫಲಿತಾಂಶಗಳು
ಜ್ಯೋತಿಷ್ಯದ ಪ್ರಕಾರ, ಈ ಗ್ರಹಣವು ಕುಂಭ ಮತ್ತು ಶತಭಿಷ ನಕ್ಷತ್ರದಲ್ಲಿ ಸಂಭವಿಸುವುದರಿಂದ ಈ ರಾಶಿಯವರ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಕುಂಭ ರಾಶಿಯವರಿಗೆ ಆತ್ಮಾವಲೋಕನ ಮತ್ತು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಮಯ ಇದಾಗಿದ್ದು, ಕೆಲವರ ಜೀವನವನ್ನು ಬದಲಾಯಿಸುವುದರ ಜೊತೆಗೆ ಒಳ್ಳೆಯ ಆರಂಭವು ಉಂಟಾಗಬಹುದು.
ಖಗೋಳಶಾಸ್ತ್ರಜ್ಞರ ಆಸಕ್ತಿ
ಭಾರತದಲ್ಲಿ ಈ ಸೂರ್ಯ ಗ್ರಹಣ ಕಾಣಿಸದೇ ಇದ್ದರೂ, ಜಗತ್ತಿನಾದ್ಯಂತ ಇರುವ ಖಗೋಳಶಾಸ್ತ್ರಜ್ಞರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇದು ಸೂರ್ಯನ ಹೊರವಲದಲ್ಲಿ ಉಂಟಾಗುವ ಚಂದ್ರನ ಕಕ್ಷೆಯ ಬದಲಾವಣೆಗಳ ಬಗ್ಗೆ ಅಧ್ಯಯನ ಮಾಡಲು ಅವಕಾಶ ಮಾಡಿಕೊಡುತ್ತದೆ. ಆದಾಗ್ಯೂ, ಇದನ್ನು ಬರೀ ಕಣ್ಣಿನಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಬೇರೆ ತಾಣಗಳಲ್ಲಿ ವೀಕ್ಷಿಸಬಹುದು (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.