Shashi Tharoor  
ದೇಶ

Shashi Tharoor | ಭೋಜನಕೂಟಕ್ಕೆ ತರೂರ್​ ಹಾಜರ್​; ಪ್ರತಿಯೊಬ್ಬರ ಆತ್ಮಸಾಕ್ಷಿಗೂ ಒಂದು ಧ್ವನಿ ಇದೆ ಎಂದು ಪವನ್​ ಖೇರಾ ವ್ಯಂಗ್ಯ

ದೆಹಲಿ: ಶುಕ್ರವಾರ (ಡಿ.5) ರಾತ್ರಿ ರಾಷ್ಟ್ರಪತಿ ಭವನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಭಾಗವಹಿಸಲು ಆಹ್ವಾನವನ್ನು ಸ್ವೀಕರಿಸಿದ್ದ ಶಶಿ ತರೂರ್ ನಿರ್ಧಾರ ಪಕ್ಷದೊಳಗಿನಿಂದ ಟೀಕೆಗೆ ಗುರಿಯಾಗಿದ್ದು, ತರೂರ್​ ಅವರನ್ನು ಕಾಂಗ್ರೆಸ್​ ನಾಯಕ ಪವನ್​ ಖೇರಾ ಟೀಕಿಸಿದ್ದಾರೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಖೇರಾ, ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನಿಸದೆ, ನನಗೆ ಮಾತ್ರ ಏಕೆ ಆಮಂತ್ರಣ ನೀಡಿದ್ದಾರೆ, ಇದರ ಹಿಂದೆ ಏನೋ ಒಂದು ತಂತ್ರವಿದೆ, ನಾನು ಅದರ ಭಾಗವಾಗಬಾರದು ಎನ್ನುವುದನ್ನು ತರೂರ್​ ಅರ್ಥಮಾಡಿಕೊಳ್ಳಬೇಕಿತ್ತು ಎಂದು ಹೇಳಿದರು.
ಶಶಿ ತರೂರ್​ ಔತಣಕೂಟದ ಆಮಂತ್ರಣಕ್ಕೆ ಒಪ್ಪಿಗೆ ಸೂಚಿಸಿದ್ದು ಕೇಳಿ ಆಶ್ಚರ್ಯವಾಯಿತು, ಆಹ್ವಾನ ನೀಡಿದ್ದಾರೆ, ಅದನ್ನು ಒಪ್ಪಿಕೊಂಡಿದ್ದೇನೆ ಎನ್ನುವ ಮಾತು ಕೇಳಿ ಅಚ್ಚರಿಯಾಗುತ್ತಿದೆ, ಪ್ರತಿಯೊಬ್ಬರ ಆತ್ಮಸಾಕ್ಷಿಗೂ ಒಂದು ಧ್ವನಿ ಇದೆ ಎಂದು ಖೇರಾ ಹೇಳಿದ್ದಾರೆ.

ಆಹ್ವಾನಕ್ಕೆ ತರೂರ್ ಪ್ರತಿಕ್ರಿಯೆ...​

ರಾಷ್ಟ್ರಪತಿಗಳು ಆಯೋಜಿಸಿದ್ದ ಭೋಜನಕೂಟಕ್ಕೆ ತಮಗೆ ಆಮಂತ್ರಣ ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿರುವ ತರೂರ್, ಯಾವ ಮಾನದಂಡದ ಮೇಲೆ ನನಗೆ ಆಹ್ವಾನ ಕಳುಹಿಸಲಾಗುತ್ತಿದೆಯೋ ತಿಳಿದಿಲ್ಲ, ಖಂಡಿತವಾಗಿಯೂ ಭೋಜನಕ್ಕೆ ಹಾಜರಾಗುತ್ತೇನೆ, ಆದರೆ, ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸದಿರುವುದು ಸರಿಯಲ್ಲ ಎಂದು ಹೇಳಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನಿನ್ನೆ ರಾತ್ರಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಭೋಜನಕೂಟಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವ ನಿಯೋಗಗಳನ್ನು ಆಹ್ವಾನಿಸುವ ಸಂಪ್ರದಾಯವನ್ನು ಮುರಿದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ರಾಹುಲ್ ಗಾಂಧಿ ಆರೋಪವನ್ನು ಸರ್ಕಾರ ಮೂಲಗಳು ತಳ್ಳಿಹಾಕಿದ್ದು, ಇದು ಆಧಾರರಹಿತವಾಗಿದೆ ಎಂದಿವೆ. ರಾಹುಲ್ ಲೋಕಸಭೆಯ ವಿರೋಧ ಪಕ್ಷದ ನಾಯಕರಾದಾಗಿನಿಂದ, ಇಲ್ಲಿಯವರೆಗೆ ಕನಿಷ್ಠ ನಾಲ್ಕು ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ ತಿಳಿಸಿದ್ದಾರೆ(ಏಜೆನ್ಸೀಸ್​).