ಸುಪ್ರೀಂ ಕೋರ್ಟ್ 
ದೇಶ

ದೇವಾಲಯದಲ್ಲಿ ಹಣ ಪಡೆದು ವಿಶೇಷ ಪೂಜೆ ಸುಪ್ರೀಂ ಅತೃಪ್ತಿ; ವೃಂದಾವನ ದೇವಸ್ಥಾನಕ್ಕೆ ಸಂಬಂಧಿತ ವಿಚಾರಣೆ | Supreme Court

ನವದೆಹಲಿ: ದೇವಸ್ಥಾನಗಳಲ್ಲಿ ದೇವತೆಗಳ ವಿರಾಮ ಸಮಯ ಭಂಗಗೊಳಿಸಿ ಶ್ರೀಮಂತರಿಂದ ಹೆಚ್ಚುವರಿ ಹಣ ಪಡೆದು ವಿಶೇಷ ಪೂಜೆ ನೆರವೇರಿಸುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವೖಂದಾವನದ ಬಂಕಿ ಬಿಹಾರ್ ಜೀ ದೇವಸ್ಥಾನದಲ್ಲಿ ದರ್ಶನ ಸಮಯ ಮತ್ತು ಆಚರಣೆಗಳಲ್ಲಿ ಬದಲಾವಣೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಕೋರ್ಟ್, ಈ ಸಂಬಂಧ ಪ್ರತಿ ಕ್ರಿಯೆ ನೀಡಲು ಮಂದಿರದ ಅಧಿಕಾರಿಗಳಿಗೆ ಸೂಚಿಸಿತು.

ಸುಪ್ರೀಂ ಕೋರ್ಟ್ ನೇಮಿಸಿರುವ ದೇವಾಲಯದ ಉನ್ನತ ಮಟ್ಟದ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದ ಕೋರ್ಟ್, ಜನವರಿ ಮೊದಲ ವಾರದಲ್ಲಿ ಮುಂದಿನ ವಿಚಾರಣೆ ನಡೆಸಲು ನಿರ್ಧರಿಸಿತು.

ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಾಂಚೋಲಿ ಇದ್ದ ಪೀಠವು, ಬಂಕಿ ಬಿಹಾರ್ ದೇವಸ್ಥಾನದಲ್ಲಿ ದರ್ಶನ ಸಮಯದಲ್ಲಿ ಬದಲಾವಣೆ ಹಾಗೂ ದೆಹ್ರಿ ಪೂಜೆ ಸಹಿತ ಹಲವು ಆಚರಣೆಗಳನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ದೇವಸ್ಥಾನದ ಸೇವಾಯತ್​ಗಳನ್ನು ಪ್ರತಿನಿಧಿಸುವ ವಕೀಲರಾದ ಶ್ಯಾಮ್ ದಿವಾನ್ ಮತ್ತು ತನ್ವಿ ದುಬೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿದೆ. ‘ದರ್ಶನ ಸಮಯಗಳು ಪರಂಪರೆ-ಆಚರಣೆಗಳ ಭಾಗ. ದೇವಾಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವುದು ಸುದೀರ್ಘ ಸಂಪ್ರದಾಯದ ಭಾಗ’ ಎಂದು ವಾದಿಸಿದ ದಿವಾನ್, ಐತಿಹಾಸಿಕವಾಗಿ ಕಟ್ಟುನಿಟ್ಟಿನ ದರ್ಶನ ಸಮಯ ಪಾಲಿಸಲಾಗುತ್ತಿದೆ ಎಂದರು. ‘ದೇವತೆಗಳು ಒಂದು ಸೆಕೆಂಡ್ ಕೂಡ ವಿರಮಿಸಲು ಬಿಡುವುದಿಲ್ಲ. ಹೆಚ್ಚು ಹಣ ಕೊಡುವ ಸಾಮರ್ಥ್ಯವಿರುವ ಜನರು ವಿಶೇಷ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಸಿಜೆಐ ಟೀಕಿಸಿದರು.

ಅಪಘಾತ ತಡೆ ಮಾರ್ಗಸೂಚಿ: ಇತ್ತೀಚೆಗೆ 15 ಜನರನ್ನು ಬಲಿ ಪಡೆದ ರಾಜಸ್ಥಾನದ ಫಲೋಡಿಯಲ್ಲಿನ ರಸ್ತೆ ಅಪಘಾತ ತಡೆಯಲು ಅಖಿಲ ಭಾರತ ಮಾರ್ಗಸೂಚಿ ರೂಪಿಸುವಂತೆ ಸುಪ್ರೀಂ ಸೋಮವಾರ ಸಲಹೆ ಮಾಡಿದೆ.