- ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಸಲ್ಲಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ
- ಈ ಕಾನೂನನ್ನು ಜಾರಿಗೆ ತಂದರೆ, ಅದು ಮಹಿಳೆಯರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು
- ದುಡಿಯುವ ಮಹಿಳೆಯರನ್ನು ಉದ್ಯೋಗ ಮಾರುಕಟ್ಟೆಯಿಂದ ಹೊರದೂಡಿದಂತೆ ಆಗಬಹುದು
- ಅವರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನ ಕೆಲಸದ ಹಕ್ಕಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು
ನವದೆಹಲಿ: ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ (Menstrual Leaves) ಕಡ್ಡಾಯವಾಗಿ ರಜೆ ನೀಡಬೇಕು ಎಂಬ ಕಾನೂನನ್ನು ಜಾರಿಗೆ ತಂದರೆ, ಅದು ಮಹಿಳೆಯರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಅವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಶುಕ್ರವಾರ (ಮಾ.13) ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಗಳು ಮುಟ್ಟಿನ ರಜೆ ನಿಯಮಗಳನ್ನು ಜಾರಿಗೊಳಿಸಲು ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಇಂತಹ ಕಾನೂನನ್ನು ಜಾರಿಗೆ ತಂದರೆ, ದುಡಿಯುವ ಮಹಿಳೆಯರನ್ನು ಉದ್ಯೋಗ ಮಾರುಕಟ್ಟೆಯಿಂದ ಹೊರದೂಡಿದಂತೆ ಆಗಬಹುದು. ಜೊತೆಗೆ ಅವರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನ ಕೆಲಸದ ಹಕ್ಕಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಾದಿಸಿದರು.
ಜಾಗೃತಿ ಮೂಡಿಸುವುದು ಮತ್ತು ಸಂವೇದನೆ ಮೂಡಿಸುವುದು ಬೇರೆ. ಆದರೆ, ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಯಾರೂ ನೇಮಿಸಿಕೊಳ್ಳುವುದಿಲ್ಲ ಎಂದು ಅರ್ಜಿದಾರರಿಗೆ ಎಚ್ಚರಿಕೆ ನೀಡಿದರು.
ಏತನ್ಮಧ್ಯೆ, ಅರ್ಜಿದಾರರು ಸುಪ್ರೀಂ ಕೋರ್ಟ್ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ವೃತ್ತೀಪರರಿಗೆ ಮುಟ್ಟಿನ ಸಮಯದಲ್ಲಿ ರಜೆ ನೀಡಬೇಕೆಂದು ಒತ್ತಾಯಿಸಿದರು. ವಿಚಾರಣೆಯ ವೇಳೆ ಇಂತಹ ಮನವಿಗಳು ಮಹಿಳೆಯರ ಪರವಾಗಿ ಕಂಡರೂ, ವಾಸ್ತವದಲ್ಲಿ ಅವು ಭಯವನ್ನು ಸೃಷ್ಟಿಸಲು ಮಾಡಲಾಗಿದೆ ಮುಖ್ಯ ನ್ಯಾಯಮೂರ್ತಿಗಳು ಘೋಷಿಸಿದರು.
ಅಂದರೆ, ಮಹಿಳೆಯರನ್ನು ಕೀಳಾಗಿ ಕಾಣುವುದರ ಜೊತೆಗೆ ಮುಟ್ಟನ್ನು ಕೆಟ್ಟ ಸಂಗತಿ ಎಂದು ಹೇಳುತ್ತಾರೆ ಎಂದು ಅಭಿಪ್ರಾಯ ಸೂಚಿಸಿದರು.
2013 ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕಾರದಲ್ಲಿದ್ದಾಗ ಸರ್ಕಾರ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ಮಂಜೂರು ಮಾಡಿತ್ತು. ಇದು ಲಿಂಗ ನ್ಯಾಯಯುತ ಸಮಾಜವನ್ನು ಸಾಕಾರಗೊಳಿಸುವ ಬದ್ಧತೆಯ ಭಾಗವಾಗಿದೆ ಎಂದು ಹಿರಿಯ ವಕೀಲ ಎಂ.ಆರ್. ಶಂಶಾದ್ ಗಮನಸೆಳೆದರು.
ಆದರೆ, ಮುಖ್ಯ ನ್ಯಾಯಾಧೀಶರು ಮುಟ್ಟಿನ ರಜೆಗಳು ಸ್ವಯಂ ಪ್ರೇರಿತ ಕ್ರಮಗಳಾಗಿದ್ದು, ಇದನ್ನು ಜಾರಿಗೆ ತರುವುದರಿಂದ ಮಹಿಳೆಯರಿಗೆ ಯಾರೂ ಉದ್ಯೋಗ ನೀಡುವುದಿಲ್ಲ ಎಂದು ಒತ್ತಿ ಹೇಳಿದರು.
ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮುಟ್ಟಿನ ನೈರ್ಮಲ್ಯದ ಬಗ್ಗೆ ಅತ್ಯಂತ ಪ್ರಗತಿಪರ ನಿಲುವನ್ನು ತಳೆದಿತ್ತು. ಇದು ಹೆಣ್ಣು ಮಗುವಿನ ಜೀವನ, ಘನತೆ, ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ಅವಿಭಾಜ್ಯ ಅಂಗ ಎಂದು ಕೋರ್ಟ್ ಘೋಷಿಸಿತು.
ಸಂವಿಧಾನದ 21ನೇ ವಿಧಿಯ ಪ್ರಕಾರ, ಮಹಿಳೆಯರು ಮತ್ತು ಹುಡುಗಿಯರ ಆರೋಗ್ಯದ ಹಕ್ಕನ್ನು ರಕ್ಷಿಸಲು ಸರ್ಕಾರಗಳು ಸಕಾರಾತ್ಮಕ ಬಾಧ್ಯತೆಯನ್ನು ಹೊಂದಿವೆ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠ ತಿಳಿಸಿತ್ತು.
ಆದಾಗ್ಯೂ, ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳು, ಕ್ರಿಯಾತ್ಮಕ ಲಿಂಗ-ಪ್ರತ್ಯೇಕ ಶೌಚಾಲಯಗಳು ಮತ್ತು ಮುಟ್ಟಿನ ಆರೋಗ್ಯ ಜಾಗೃತಿ ಅಭಿಯಾನಗಳನ್ನು ಖಚಿತಪಡಿಸುವ ಸಲುವಾಗಿ ನ್ಯಾಯಾಲಯ ಎಲ್ಲಾ ಸರ್ಕಾರಗಳಿಗೂ ಕಡ್ಡಾಯ ನಿರ್ದೇಶವನ್ನು ನೀಡಿದೆ (ಏಜೆನ್ಸೀಸ್).