Supreme Court (ಚಿತ್ರ X) 
ದೇಶ

ದೇಶದ ಎಸ್‌ಸಿ/ಎಸ್‌ಟಿ ಮೀಸಲಾತಿ ಕ್ಷೇತ್ರಗಳ ಬದಲಾವಣೆಗೆ ಆದೇಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ | Supreme Court

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಗಳಿಗೆ ಮೀಸಲಾಗಿರುವ ಕ್ಷೇತ್ರಗಳನ್ನು ಕಡ್ಡಾಯವಾಗಿ ಅದಲುಬದಲು ಮಾಡಲು ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ(ನ. 04) ವಿಚಾರಣೆ ನಡೆಸಲು ನಿರಾಕರಿಸಿದೆ ಎಂದು ವರದಿಯಾಗಿದೆ.

ನವದೆಹಲಿ: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಗಳಿಗೆ ಮೀಸಲಾಗಿರುವ ಕ್ಷೇತ್ರಗಳನ್ನು ಕಡ್ಡಾಯವಾಗಿ ಅದಲುಬದಲು ಮಾಡಲು ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ(ನ. 04) ವಿಚಾರಣೆ ನಡೆಸಲು ನಿರಾಕರಿಸಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ 191-ಕದಿಪುರ ವಿಧಾನಸಭಾ ಕ್ಷೇತ್ರದ ಮತದಾರರಾದ ಜಗದೀಶ್ ಸಿಂಗ್ ಎಂಬುವವರು, ಈ ಕ್ಷೇತ್ರವು ರಚನೆಯಾದಾಗಿನಿಂದ ಸುಮಾರು ಏಳು ದಶಕಗಳ ಕಾಲ ಪರಿಶಿಷ್ಟ ಜಾತಿಗಳಿಗೆ (SC) ಮೀಸಲಾತಿಯನ್ನು ಮುಂದುವರಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಕ್ಷೇತ್ರವನ್ನು ಬದಲಾಯಿಸುವ ವ್ಯವಸ್ಥೆ ಇಲ್ಲದಿರುವುದು ಸಂವಿಧಾನದ 14, 15 ಮತ್ತು 19ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಅಲ್ಲದೆ, ಅಭ್ಯರ್ಥಿಗಳು ಕೇವಲ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿರಬೇಕೆಂಬ ನಿರ್ಬಂಧವಿರುವುದರಿಂದ, ಮತದಾರರು ಆಯ್ಕೆ ಮಾಡಬಹುದಾದ ಅಭ್ಯರ್ಥಿಗಳ ವ್ಯಾಪ್ತಿಯು ಸೀಮಿತಗೊಂಡು, ಅವರ ಚುನಾವಣಾ ಆಯ್ಕೆಗಳ ಮೇಲೆ ನಿರ್ಬಂಧ ಹೇರಿದಂತಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಪೀಠವು, 2002ರ ಸೀಮಾ ನಿರ್ಣಯ ಕಾಯ್ದೆಯ ಸೆಕ್ಷನ್ 9(1)(ಸಿ) ಅನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಇಂತಹ ನಿರ್ಧಾರಗಳು ಶಾಸಕಾಂಗದ ವ್ಯಾಪ್ತಿಯಲ್ಲಿ ಬರುತ್ತವೆ. ಮತ್ತು ನ್ಯಾಯಾಲಯಗಳು ಆದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ವೇಳೆ ಸಿಜೆಐ ಸೂರ್ಯಕಾಂತ್ ಅವರು, ನೀವು ತಪ್ಪು ಸಂಖ್ಯೆಯನ್ನು ಡಯಲ್ ಮಾಡುತ್ತಿದ್ದೀರಿ. ಇದು ಪ್ರತಿಭಟನೆಗಳು ಮತ್ತು ಪ್ರದರ್ಶನಗಳ ಕಾಲ. ಬಹುಶಃ ನೀವೂ ಇದನ್ನೇ ಅನುಸರಿಸಬೇಕು ಎಂದು ಅರ್ಜಿದಾರರಿಗೆ ಸಲಹೆ ನೀಡಿದ್ದಾರೆ (ಏಜೆನ್ಸೀಸ್).