ನಾಳೆಯೇ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಖಡಕ್ ಆದೇಶ 
ದೇಶ

ದೀಪತ್ತೂನ್‌ನಲ್ಲಿ ನಾಳೆಯೇ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಖಡಕ್ ಆದೇಶ: ದೇವಾಲಯದ ಭದ್ರತೆಗೆ ಸಿಆರ್‌ಪಿಎಫ್ ನಿಯೋಜನೆ! | Thiruparankundram Controversy

ನವದೆಹಲಿ: ತಮಿಳುನಾಡಿನ ಮಧುರೈನ ತಿರುಪ್ಪರಂಕುಂದ್ರಂ ದೇವಾಲಯದ ಬೆಟ್ಟದ ಮೇಲಿರುವ ದೀಪತ್ತೂನ್ ಕಂಬದಲ್ಲಿ ನಾಳೆಯೇ (ಶನಿವಾರ, ನವೆಂಬರ್ 28) ಕಾರ್ತಿಕ ದೀಪವನ್ನು ಬೆಳಗಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನ ನೀಡಿದೆ. ಅಲ್ಲದೆ, ದೇವಾಲಯದ ಭದ್ರತಾ ವ್ಯವಸ್ಥೆಯನ್ನು ತಕ್ಷಣವೇ ಕೇಂದ್ರ ಮೀಸಲು ಪೊಲೀಸ್ ಪಡೆ ವಹಿಸಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

ನವೆಂಬರ್ 20ರಂದು ನೀಡಿದ್ದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಟ್ರಸ್ಟಿ ಸಮಿತಿಯನ್ನು ರದ್ದುಗೊಳಿಸಿರುವ ನ್ಯಾಯಾಲಯ, ದೇವಾಲಯದ ಸಂಪ್ರದಾಯ ಮತ್ತು ವಿಧಿವಿಧಾನಗಳಿಗೆ ಅನುಗುಣವಾಗಿ ಆಡಳಿತ ನಡೆಸಲು ಇಬ್ಬರು ನ್ಯಾಯಾಧೀಶರನ್ನು ರಿಸೀವರ್‌ಗಳಾಗಿ ನೇಮಿಸಿದೆ. ಅಲ್ಲದೆ, ತಮಿಳುನಾಡು ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್, ಪೊಲೀಸ್ ಮಹಾನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಒಟ್ಟು 15 ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ್ದು, ಡಿಸೆಂಬರ್ 15ರಂದು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಸಿಆರ್‌ಪಿಎಫ್ ಭದ್ರತೆ ಮತ್ತು ದರ್ಗಾ ಭದ್ರತೆ ಯಥಾಸ್ಥಿತಿ

ಚೆನ್ನೈನಲ್ಲಿರುವ ಸಿಆರ್‌ಪಿಎಫ್ ಕಮಾಂಡೆಂಟ್ ತಕ್ಷಣವೇ ದೇವಾಲಯದ ಭದ್ರತಾ ಹೊಣೆಯನ್ನು ವಹಿಸಿಕೊಳ್ಳುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಇದೇ ವೇಳೆ, ಬೆಟ್ಟದ ಸಮೀಪದಲ್ಲಿರುವ ದರ್ಗಾದ ಪ್ರಸ್ತುತ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ಪೀಠ ಸ್ಪಷ್ಟಪಡಿಸಿದೆ. ನ್ಯಾಯಾಲಯ ನೇಮಿಸಿರುವ ರಿಸೀವರ್‌ಗಳಿಗೆ ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಸಹಕಾರ ನೀಡಬೇಕು ಮತ್ತು ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜಿಲ್ಲಾಧಿಕಾರಿ ಕ್ಷಮೆಯಾಚನೆ ಮೊಸಳೆ ಕಣ್ಣೀರು ಎಂದ ಸುಪ್ರೀಂ ಕೋರ್ಟ್

ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಸಲ್ಲಿಸಿದ್ದ ಆರಂಭಿಕ ವರದಿ ಮತ್ತು ಕ್ಷಮೆಯಾಚನೆಯನ್ನು ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದೆ. ಜಿಲ್ಲಾಧಿಕಾರಿಗೆ ಏನೂ ತಿಳಿಯದವರಂತೆ ವರ್ತಿಸಿ ನಂತರ ವಿಷಾದ ವ್ಯಕ್ತಪಡಿಸುತ್ತಿರುವುದು ಕೇವಲ ಮೊಸಳೆ ಕಣ್ಣೀರು ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿದೆ.

ನ್ಯಾಯಾಲಯದ ಮುಂದೆ ದೇವಾಲಯದ ಟ್ರಸ್ಟಿ ಸಮಿತಿಯು ಇದುವರೆಗೂ ಹಾಜರಾಗದಿರುವುದು ಮತ್ತು ಅವರ ಪರವಾಗಿ ನೀಡಲಾದ ಹೇಳಿಕೆಯು ಮೇಲ್ನೋಟಕ್ಕೆ ನ್ಯಾಯಾಲಯದ ಘನತೆ ಮತ್ತು ಆದೇಶಗಳಿಗೆ ಮಾಡಿದ ಅವಮಾನವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ನವೆಂಬರ್ 20ರ ಆದೇಶದ ಹೊರತಾಗಿಯೂ ದೀಪ ಬೆಳಗಿಸದೆ, ದೇವಾಲಯದ ಸಂಪ್ರದಾಯಗಳು ಮತ್ತು ಆಚರಣೆಗಳ ನೆಪವೊಡ್ಡಿ ನಿರ್ಣಯ ಅಂಗೀಕರಿಸಿದ ಟ್ರಸ್ಟ್ ಮಂಡಳಿಯ ನಡೆ ಉದ್ದೇಶಪೂರ್ವಕ ಮತ್ತು ಬಹಿರಂಗ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯಾರಿಗೆಲ್ಲಾ ನ್ಯಾಯಾಂಗ ನಿಂದನೆ ನೋಟಿಸ್?

ನವೆಂಬರ್ 20ರ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಮತ್ತು ಡಿಜಿಪಿ ಮಹೇಶ್ ಕುಮಾರ್ ಅವರೊಂದಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು, ಮಧುರೈ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಲಾಗಿದೆ. ಪ್ರಮುಖವಾಗಿ ಎಚ್‌ಆರ್ & ಸಿಇ ಆಯುಕ್ತ ಬಿ. ರಾಜಾರಾಮ್, ಪಿ.ಜಿ. ವಿನಯ್, ಸ್ಥಳೀಯ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ, ಪೊಲೀಸ್ ಆಯುಕ್ತ ಎಸ್. ರಾಜೇಂದ್ರ, ಉಪ ಪೊಲೀಸ್ ಆಯುಕ್ತರು, ಎಚ್‌ಆರ್ & ಸಿಇ ಕಾರ್ಯದರ್ಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಆದೇಶ ಜಾರಿಗೆ ಸಂಬಂಧಿಸಿದ 15 ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿವರಣೆ ಕೇಳಲಾಗಿದೆ.

ಸಾಂವಿಧಾನಿಕ ಚೌಕಟ್ಟಿಗೆ ಅಡ್ಡಿಪಡಿಸುವಂತಿಲ್ಲ: ಸುಪ್ರೀಂ

ತನ್ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವವರ ವಿರುದ್ಧ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ಹೊರಡಿಸುವ ಆದೇಶಗಳು ಸಂವಿಧಾನದಿಂದ ತಮ್ಮ ಅಧಿಕಾರವನ್ನು ಪಡೆಯುತ್ತವೆ ಮತ್ತು ಎಲ್ಲಾ ಪ್ರಾಧಿಕಾರಗಳು ಹಾಗೂ ಸಂಸ್ಥೆಗಳು ಅವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗುವ ಮೂಲಕ ಸಾಂವಿಧಾನಿಕ ಚೌಕಟ್ಟು ಮತ್ತು ಕಾನೂನಿನ ಆಳ್ವಿಕೆಗೆ ಅಡ್ಡಿಪಡಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಆದೇಶಗಳ ಉದ್ದೇಶಪೂರ್ವಕ ಉಲ್ಲಂಘನೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಮತ್ತು ಅಂತಹ ಪ್ರಕರಣಗಳನ್ನು ಅತ್ಯಂತ ಕಠಿಣವಾಗಿ ನಿಭಾಯಿಸಬೇಕಾಗುತ್ತದೆ. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವವರನ್ನು ನ್ಯಾಯಾಂಗ ನಿಂದನೆ ಕಾಯ್ದೆಯಡಿ ಶಿಕ್ಷಿಸುವ ಅಧಿಕಾರ ತನಗಿದೆ ಮತ್ತು ಅಗತ್ಯಬಿದ್ದಾಗ ಆ ಅಧಿಕಾರವನ್ನು ಚಲಾಯಿಸಲು ತಾನು ಹಿಂದೇಟು ಹಾಕುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಡಿಸೆಂಬರ್ 15ರಂದು ಎಲ್ಲಾ ಅಧಿಕಾರಿಗಳು ಖುದ್ದು ಹಾಜರಾಗಿ ತಮ್ಮ ನಡೆಗೆ ವಿವರಣೆ ನೀಡಬೇಕಿದೆ(ಏಜೆನ್ಸೀಸ್​).